ಜಿಲ್ಲೆ

ಬಾಡಿಗೆ ಮನೆಯಲ್ಲಿತ್ತು ಕಂತೆ, ಕಂತೆ ನೋಟುಗಳು

Uttara Kannada - Subash Hegde

ದಾಂಡೆಲಿ: ಬಾಡಿಗೆ ಮನೆಯೊಂದರಲ್ಲಿ ಕಂತೆ, ಕಂತೆ ನಕಲಿ ನೋಟು ಸಿಕ್ಕಿರುವ ವಿಚಾರ ದಾಂಡೇಲಿಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪೊಲೀಸರು ಈ ಸಂಬಂಧ ತನಿಖೆ ನಡೆಸಿದ್ದು, ಬಾಡಿಗೆದಾರನನ್ನು ವಿಚಾರಣೆಗಾಗಿ ಕರೆತರಲು ಕ್ರಮ ವಹಿಸಿದ್ದಾರೆ.

ನಗರದ ಗಾಂಽನಗರ ಬಡಾವಣೆಯ ನೂರ್‌ಜಾನ್ ಜುಂಜವಾಡ್ಕರ್ ಅವರ ಮನೆಯಲ್ಲಿ ಗೋವಾ ಮೂಲದವನು ಎನ್ನಲಾದ ಅರ್ಷದ್ ಖಾನ್ ವಾಸವಿದ್ದ. ಆದರೆ, ಆತ 1 ತಿಂಗಳಿಂದ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಮನೆಯ ಹಿಂದಿನ ಬಾಗಿಲು ತೆಗೆದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಅದರ ಆಧಾರದ ಮೇಲೆ ಶಹರ ಠಾಣೆ ಪೊಲೀಸರು ಮಂಗಳವಾರ ಮನೆಗೆ ತೆರಳಿ ಪರಿಶೀಲಿಸಿದಾಗ ಸುಮಾರು 14 ಲಕ್ಷ ಮೌಲ್ಯ ತೋರಿಸುವ ನೋಟುಗಳ ರಾಶಿ ಪತ್ತೆಯಾಗಿತ್ತು.

500 ರೂ. ಮುಖಬೆಲೆಯ ನೋಟುಗಳು ಇವಾಗಿದ್ದು, ಅದರಲ್ಲಿ ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆದಿದೆ. ನೋಟಿನ ಸಂಖ್ಯೆಯಿರುವ ಜಾಗದಲ್ಲಿ ಸೊನ್ನೆಯನ್ನು ನಮೂದಿಸಲಾಗಿದೆ. ಮತ್ತು `ಮೂವಿ ಶೂಟಿಂಗ್ ಪರ್ಪಸ್ ಓನ್ಲಿ' ಎಂದು ಬರೆಯಲಾಗಿದೆ. ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದಾರೆ.

ಅರ್ಷದ್ ಖಾನ್‌ಗೆ ಕರೆ ಮಾಡಿ, ಆತನನ್ನು ಕರೆತರುವ ವ್ಯವಸ್ಥೆಯಾಗಿದ್ದು, ಆತನನ್ನು ವಿಚಾರಣೆ ಮಾಡಿದ ಬಳಿಕ ಎಫ್‌ಐಆರ್ ದಾಖಲಿಸಬೇಕೆ ಬೇಡವೇ ಎಂದು ನಿರ್ಧರಿಸಲಿದ್ದೇವೆ ಎಂದು ದಾಂಡೇಲಿ ಡಿವೈಎಸ್‌ಪಿ ಶಿವಾನಂದ ಎನ್.ಎಂ.ತಿಳಿಸಿದ್ದಾರೆ.