ಜಿಲ್ಲೆ

ನಕಲಿಯಾಗಿ ಬಂದ ಅಸಲಿ ಪೇದೆ ಅಂದರ್!

Dharwad

ಹುಬ್ಬಳ್ಳಿ: ಪೊಲೀಸ್ ಕಾನ್​ಸ್ಟೇಬಲ್ ಲಿಖಿತ ಪರೀಕ್ಷೆಗೆ ಹಾಜರಾಗಿದ್ದ ನಕಲಿ ಅಭ್ಯರ್ಥಿ ಒಬ್ಬನನ್ನು ಹುಬ್ಬಳ್ಳಿ- ಧಾರವಾಡ ಕಮಿಷನರೇಟ್ ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ. ಪೊಲೀಸ್ ಕಾನ್​ಸ್ಟೇಬಲ್ ಆಗಿರುವ ವ್ಯಕ್ತಿಯೇ ಇಲ್ಲಿ ನಕಲಿ ಅಭ್ಯರ್ಥಿಯಾಗಿರುವ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಹಡಗಿನಹಾಳ ಗ್ರಾಮದ ನಿವಾಸಿ ರಾಯಭಾಗ ತಾಲೂಕು ಅಂಕಲಗಿ ಪೊಲೀಸ್ ಠಾಣೆ ಕಾನ್​ಸ್ಟೇಬಲ್ ಅಡಿವೆಪ್ಪ ಯಲ್ಲಪ್ಪ ಯರಗುದ್ರಿ (24) ಬಂಧಿತ ವ್ಯಕ್ತಿ.

ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಭಾನುವಾರ ಕಾನ್​ಸ್ಟೇಬಲ್ ಹುದ್ದೆಗಾಗಿ ಲಿಖಿತ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು. ಗೋಕುಲ ರಸ್ತೆಯ ಕೆಎಲ್​ಇ ಐಟಿ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ ಅಸಲಿ ಅಭ್ಯರ್ಥಿ ರಾಯಭಾಗ ತಾಲೂಕು ಸವಸುದ್ದಿ ಗ್ರಾಮದ ಲಕ್ಕಪ್ಪ ಲಕ್ಷ್ಮಣ ಬೆಟಗೇರಿ ಬದಲಾಗಿ ಆತನ ಸಹೋದರ ಸಂಬಂಧಿ, ಕಾನ್​ಸ್ಟೇಬಲ್ ಅಡಿವೆಪ್ಪ ಪರೀಕ್ಷೆಗೆ ಹಾಜರಾಗಿದ್ದ. ಒಎಂಆರ್ ಶೀಟ್​ನಲ್ಲಿ ಲಕ್ಕಪ್ಪ ಬೆಟಗೇರಿ ಎಂದು ಸಹಿ ಮಾಡಿ ಸರ್ಕಾರಕ್ಕೆ ಮೋಸ ಮಾಡಲು ಹೊಂಚು ಹಾಕಿದ್ದ. ಡಿಸಿಪಿ (ಕಾನೂನು ಸುವ್ಯವಸ್ಥೆ) ಕೆ. ರಾಮರಾಜನ್ ಹಾಗೂ ಸಂಚಾರ ವಿಭಾಗದ ಎಸಿಪಿ ಎಂ.ಎಸ್. ಹೊಸಮನಿ ಅವರು ಖಚಿತ ಮಾಹಿತಿ ಮೇರೆಗೆ ನಕಲಿ ಅಭ್ಯರ್ಥಿಯನ್ನು ಪತ್ತೆ ಹಚ್ಚಿದರು. ಅಸಲಿ ಅಭ್ಯರ್ಥಿ ಸಹಿ ಹಾಗೂ ಭಾವಚಿತ್ರ ತಾಳೆ ನೋಡಿದಾಗ ವಂಚನೆ ಬಯಲಿಗೆ ಬಂದಿದೆ. ಗೋಕುಲ ರೋಡ್ ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್​ಪೆಕ್ಟರ್ ಜಗದೀಶ ಹಂಚಿನಾಳ ತನಿಖೆ ಮುಂದುವರಿಸಿದ್ದಾರೆ. ಅಸಲಿ ಅಭ್ಯರ್ಥಿ ಲಕ್ಕಪ್ಪ ನಾಪತ್ತೆಯಾಗಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಪೊಲೀಸ್ ಹುದ್ದೆ ಕೈತಪ್ಪುವ ಭೀತಿ?: ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡೇ ಪೊಲೀಸ್ ಇಲಾಖೆಗೆ ದ್ರೋಹ ಬಗೆಯುವ ಹುನ್ನಾರ ಮಾಡಿರುವ ಆರೋಪ ಎದುರಿಸುತ್ತಿರುವ ನಕಲಿ ಅಭ್ಯರ್ಥಿ, ಅಸಲಿ ಕಾನ್​ಸ್ಟೇಬಲ್ ಅಡಿವೆಪ್ಪ ಯರಗುದ್ರಿ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇಲಾಖೆ ಯಾವ ಕ್ರಮ ಜರುಗಿಸುವುದೋ ಕಾದು ನೋಡಬೇಕಿದೆ.