ಜಿಲ್ಲೆ

ಬಾಂಬ್​ ಬೆದರಿಕೆ ಹಿಂದೆ 'ನ್ಯಾಯ'ದ ಕೋರಿಕೆ...

ಉಡುಪಿ ವಿದ್ಯೋದಯ ಶಾಲೆ ಸ್ಫೋಟಿಸುವ ಸಂದೇಶ

ಹೈದರಾಬಾದ್​ನಲ್ಲಿ ನಡೆದ ರೇಪ್​ ಕೇಸ್​ ಕಾರಣ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿಯ ವಿದ್ಯೋದಯ ಪಬ್ಲಿಕ್​ ಸ್ಕೂಲ್​ಗೆ ಬಾಂಬ್​ ಹಾಕಿ ಸ್ಫೋಟಿಸುವ ಬೆದರಿಕೆಯ ಕರೆಯ ಹಿಂದೆ ಹೈದರಾಬಾದ್​ನಲ್ಲಿ ಇತ್ತೀಚೆಗೆ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ನ್ಯಾಯ ಒದಗಿಸುವ ಉದ್ದೇಶ ಇರುವುದು ತಿಳಿದು ಬಂದಿದೆ.

ಜೂನ್​16ರಂದು ಶಾಲೆಯ ಮೇಲ್​ಗೆ ಮಧ್ಯಾಹ್ನ 1:29ಕ್ಕೆ ಹಾಗೂ ಸಂಜೆ 5:30 ಗಂಟೆಗೆ divijpprabhakaralakshmi@gmail.com ಎಂಬ ಜಿ-ಮೇಲ್​ನಿಂದ ಮೆಸೇಜ್​ ಬಂದಿದೆ.

ಪ್ರತಿಭಟನೆಗೆ ಪ್ರಚೋದನೆ

ಶಾಲೆಯಲ್ಲಿ ಬಾಂಬ್​ ಸ್ಫೋಟಿಸಿ ಮಕ್ಕಳು ಮೃತಪಟ್ಟರೆ ವಿದ್ಯಾರ್ಥಿಗಳ ಪಾಲಕರು ಶಾಲೆಯ ವಿರುದ್ಧ ಪ್ರತಿಭಟಿಸಲು ಪ್ರಚೋದನೆಯಾಗಬೇಕು. ಆ ಪ್ರತಿಭಟನೆ ಹೈದರಾಬಾದ್​ನ ರೇಪ್​ ವಿಕ್ಟಿಂಗೆ ನ್ಯಾಯ ಸಿಗುವಂತಾಗಬೇಕು ಎಂದು ಮೇಲ್​ನಲ್ಲಿ ತಿಳಿಸಲಾಗಿದೆ. ಅಲ್ಲದೆ, ಬೆಂಗಳೂರು ರಾಂಪುರದ ನಿವಾಸಿ ದಿವಿಜ್​ ಪಿ., ಆತನ ತಂದೆ ಪ್ರಭಾಕರ ಮತ್ತು ತಾಯಿ ಲಕ್ಷ್ಮೀ ಇವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವಂತೆ ಮಾಡುವ ಉದ್ದೇಶದಿಂದ ಉಡುಪಿಯ ವಿದ್ಯೋದಯ ಸ್ಕೂಲ್​ಗೆ ಬಾಂಬ್​ ಹಾಕುವುದಾಗಿ ಶಾಲೆಗೆ ಬಂದ ಮೇಲ್​ನಲ್ಲಿ ಉಲ್ಲೇಖಿಸಲಾಗಿದೆ.

ತೀವ್ರ ಪರಿಶೀಲನೆ

ಶಾಲೆಯ ಮೇಲ್​ಗೆ ಬಂದಿದ್ದ ಈ ಸಂದೇಶವನ್ನು ಕಚೇರಿಯ ಸಹಾಯಕಿ ಶ್ವೇತಾ ತಿಳಿಸಿದ್ದು, ಶಾಲೆಯ ಆಫೀಸ್​ ಇನ್​ಚಾರ್ಜ್​ ಶಶಿಕಾಂತ ಎಂಬವರು ಜೂನ್​ 16ರಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ವಿಧ್ವಂಸಕ ವಿರೋಧಿ ತಂಡ (ಎಎಸ್​ಟಿ), ಶ್ವಾನ ದಳ ಮತ್ತು ಬಾಂಬ್​ ನಿಷ್ಕ್ರಿಯ ದಳದವರು ಶಾಲೆಯನ್ನು ವಶಕ್ಕೆ ಪಡೆದು ತೀವ್ರ ಪರಿಶೀಲನೆ ನಡೆಸಿದರು. ಎಲ್ಲಿಯೂ ಸ್ಫೋಟಕ ವಸ್ತುಗಳು ಲಭಿಸಿರಲಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್​ ಬೆದರಿಕೆಯ ಕರೆಯಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಮ್​ ಶಂಕರ್​ ತಿಳಿಸಿದ್ದರು.

ಪ್ರಾಂಶುಪಾಲರನ್ನು ಕೊಲೆ ಮಾಡುತ್ತೇವೆ...

ಬೆಳಗ್ಗೆ ಬಂದಿದ್ದ ಬಾಂಬ್​ ಸ್ಫೋಟಿಸುವ ಇ-ಮೇಲ್​ ಬೆದರಿಕೆಯ ಕರೆ ಹುಸಿಯಾಗಿದೆ ಎಂದು ಪೊಲೀಸರು ತಿಳಿಸಿದ ಬಳಿಕ, ಸಂಜೆ 5:30ಕ್ಕೆ ಮತ್ತದೇ ಜಿ-ಮೇಲ್​ನಿಂದ ಇನ್ನೊಂದು ಸಂದೇಶ ಬಂದಿದೆ. ಎರಡನೇ ಮೇಲ್​ನಲ್ಲಿ, ಮತ್ತೆ ಅದೇ ಹೈದರಾಬಾದ್​ನಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು. ಪೊಲೀಸರು ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ನಾವು ಶಾಲೆಯ ಮುಖ್ಯಸ್ಥ ಅಥವಾ ಪ್ರಾಂಶುಪಾಲರನ್ನು ತುಂಡರಿಸಿ ಕೊಲೆ ಮಾಡುತ್ತೇವೆ ಎಂದು ಮತ್ತೊಂದು ಬೆದರಿಕೆ ಹಾಕಿದ್ದಾರೆ.

ರಾಜ್ಯದ ವಿವಿಧೆಡೆಯ ಶಾಲೆಗಳಿಗೆ ಇದೇ ರೀತಿ ಹುಸಿ ಬಾಂಬ್​ ಬೆದರಿಕೆಯ ಕರೆ ಮಾಡಲಾಗಿದೆ. ಉಡುಪಿಯ ವಿದ್ಯೋದಯ ಪಬ್ಲಿಕ್​ ಶಾಲೆಯ ಇ-ಮೇಲ್​ಗೆ ಹೈದರಾಬಾದ್​ನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬೆದರಿಕೆಯ ಸಂದೇಶ ರವಾನಿಸಿದ್ದಾರೆ. ಈ ವಿಚಾರದಲ್ಲಿ ಉಡುಪಿಯ ಸಾರ್ವಜನಿಕರು ಅಥವಾ ಪಾಲಕರು ಗೊಂದಲ, ಭಯಕ್ಕೆ ಒಳಗಾಗಬಾರದು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇ-ಮೇಲ್​ ಮಾಡಿದವರ ಪತ್ತೆಗೆ ತನಿಖೆ ಆರಂಭಗೊಂಡಿದೆ. | ಹರಿರಾಮ್​ ಶಂಕರ್​. ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠ