ಮೈಸೂರು: ನಗರದ ಹೊರ ವಲಯದ ಬನ್ನೂರು ರಸ್ತೆಯ ಜ್ಞಾನ ಸರೋವರ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ಬುಧವಾರ ಹುಸಿ ಬಾಂಬ್ ಬೆದರಿ ಕೆ ಬಂದಿದ್ದು, ಇದರಿಂದ ಹಲವು ಹೊತ್ತು ಶಾಲಾ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿ ಅಂತಿಮವಾಗಿ ಹುಸಿಬಾಂಬ್ ಬೆದರಿಕೆ ಎಂದು ಖಚಿತವಾದ ನಂತರ ಎಲ್ಲರು ನಿಟ್ಟುಸಿರು ಬಿಟ್ಟರು.
ಅಹಮದಬಾದ್‌ನಲ್ಲಿ ನಡೆದ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ನ್ಯಾಯ ದೊರೆಯದೆ ಇದ್ದರೆ ಶಾಲೆಯನ್ನು ಬಾಂಬ್ ನಿಂದ ಸ್ಫೋಟಿಸಲಾಗುವುದು ಎಂದು ಅಪರಚಿತ ವ್ಯಕ್ತಿಯೊಬ್ಬ ಶಾಲೆಯ ಇ-ಮೇಲ್ ಐಡಿಗೆ ಮಧ್ಯಾಹ್ನ ಸಂದೇಶ ಕಳುಹಿಸಿದ್ದಾನೆ. ಈ ವಿಚಾರವನ್ನು ಶಾಲಾ ಸಿಬ್ಬಂದಿ ಶಾಲೆಯ ಮುಖ್ಯಸ್ಥರ ಗಮನಕ್ಕೆ ತಂದರು. ಶಾಲೆಯ ಸಿಇಒ ಪವನ್ ಶೆಟ್ಟಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣು ವರ್ಧನ್ ಅವರಿಗೆ ಮಾಹಿತಿ ನೀಡಿದರು. ಬಾಂಬ್ ಸಂದೇಶ ಬಂದ ಕೂಡಲೇ ಶಾಲೆಯಲ್ಲಿದ್ದ ಸಿಬ್ಬಂದಿ ಹಾಗೂ 200 ಮಕ್ಕಳನ್ನು ಶಾಲೆಯಿಂದ ಹೊರಗೆ ಕರೆ ತರಲಾಯಿತು.
ತಕ್ಷಣ ಸ್ಥಳಕ್ಕೆ ಮೈಸೂರು ದಕ್ಷಿಣ ಠಾಣೆ ಪೊಲೀಸರು ಬಾಂಬ್‌ಪತ್ತೆ ದಳ, ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ ಮತ್ತು ಬೆರಳಚ್ಚು ತಂಡದೊಂದಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಶಾಲೆಯ ಸಭಾಂಗಣ, ಪ್ರಾಂಶುಪಾಲರ ಕೊಠಡಿ, ಪ್ರಾಧ್ಯಾಪಕರ ಕೊಠಡಿ, ತರಗತಿ ಕೊಠಡಿಗಳು, ಶೌಚಗೃಹ, ಪಾರ್ಕಿಂಗ್ ಸೇರಿದಂತೆ ಪ್ರತಿಯೊಂದು ಸ್ಥಳಗಳನ್ನು ಕೂಲಂಕಷವಾಗಿ ಸತತ ಆರು ಗಂಟೆಗಳ ಕಾಲ ಶಾಲಾ ಆವರಣದಲ್ಲಿ ಶೋಧಿಸಿ ಹುಸಿಬಾಂಬ್ ಸಂದೇಶ ಎಂಬುದನ್ನು ದೃಢಪಡಿಸಿದರು.