ವಿಜಯವಾಣಿ ಸುದ್ದಿಜಾಲ ಕಾರವಾರ
ರೈಲಿನಲ್ಲಿ ಮೊಬೈಲ್ ಕಳೆದಿದೆ ಎಂದು ದೂರು ನೀಡಲು ಬಂದ ವ್ಯಕ್ತಿಯು ಮತ್ತೊಂದು ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಕಾರವಾರದಲ್ಲಿ ನಡೆದಿದೆ.
ಜಮ್ಮು ಕಾಶ್ಮೀರದ ಶ್ರೀನಗರ ಲಾಜ್ ಬಾಜಾರ್‌ನ ಮೊಬಾಶಿರ್ ಮೊಹಮದ್ ಯೂಸೂಫ್ ಕೋಜ್ವಾಲ್ ಬಂಧಿತ. ಕೇರಳದಿಂದ ಕಾರವಾರಕ್ಕೆ ಪ್ರಯಾಣಿಸುತ್ತಿದ್ದ ಆತನ ಮೊಬೈಲ್ ಕಳ್ಳತನವಾಗಿತ್ತು. ಈ ಬಗ್ಗೆ ಮಾ.16 ರಂದು ಕಾರವಾರ ರೈಲ್ವೆ ರಕ್ಷಣಾ ದಳ ಠಾಣೆಗೆ ದೂರು ನೀಡಿದ್ದ. ಪೊಲೀಸರು ಕಾರ್ಯಾಚರಣೆ ನಡೆಸಿ ಕಳೆದ ಮೊಬೈಲ್ ಪತ್ತೆ ಹಚ್ಚಿದ್ದಾರೆ. ಆದರೆ, ಮೊಬೈಲ್ ನಿನ್ನದೇ ಎಂಬ ಬಗ್ಗೆ ದಾಖಲೆ ತೋರಿಸು ವಾಪಸ್ ನೀಡುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಆಗ ಮೊಬೈನ ಗ್ಯಾಲರಿಯಲ್ಲಿ ಆಧಾರ ಕಾರ್ಡ್ ಇದೆ ಎಂದಿದ್ದ. ಮೊಬೈಲ್ ಗ್ಯಾಲರಿ ತೆರೆದ ಪೊಲೀಸರಿಗೆ ಅಚ್ಚರಿ ಕಾದಿತ್ತು. ರಾಜಸ್ತಾನದ ವಿಳಾಸವಿರುವ ಕುರಿಯಾ ದಾಮೋರ್ ಹೆಸರಿನ ಆಧಾರ್ ಕಾರ್ಡ್ ನಲ್ಲೂ ಈತನ ಫೋಟೋವಿತ್ತು. ಅಲ್ಲದೆ, ಇನ್ನೂ ಕೆಲವರ ಆಧಾರ ಕಾರ್ಡ್‌ಳ ಸ್ಕ್ರೀನ್ ಶಾಟ್ ಕೂಡ ಇತ್ತು. ಇನ್ನು ಆತ ಪಡೆದ ಮೊಬೈಲ್ ಸಿಮ್ ಸಹ ಬೇರೆಯವರ ಹೆಸರಿನಲ್ಲಿತ್ತು. ಈತ ನಕಲಿ ಆಧಾರ ಕಾರ್ಡ್ ಜಾಲ ನಡೆಸುತ್ತಿದ್ದಾನೆ ಎಂದು ಅನುಮಾನಗೊಂಡ ಆರ್‌ಪಿಎಫ್ ಅಧಿಕಾರಿಗಳು ಆತನನ್ನು ಕಾರವಾರ ಗ್ರಾಮೀಣ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.