ಬೆಂಗಳೂರು: ವಿಶಿಷ್ಟ ಗುರುತಿನ ಆಧಾರ್ ಸಂಖ್ಯೆ, ಚುನಾವಣಾ ಗುರುತಿನ ಚೀಟಿಗಳ ಸೃಷ್ಟಿಯು ರಾಷ್ಟ್ರ ವಿರೋಧಿ ಕೃತ್ಯವಾಗಿದೆ. ರಾಷ್ಟ್ರದ ಆಂತರಿಕ ಭದ್ರತೆಗೆ ಧಕ್ಕೆಯಾಗಲಿದೆ ಎಂದು ಬಿಜೆಪಿ ಶಾಸಕ, ಮಾಜಿ ಸಚಿವ ಎಸ್.ಸುರೇಶಕುಮಾರ್ ಕಳವಳ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಕೇವಲ ರಾಜಕೀಯ ಪ್ರಶ್ನೆಯಲ್ಲ. ಸಮಾಜದ ಅಳಿವು, ಉಳಿವಿನ ಪ್ರಶ್ನೆಯಾಗಿದೆ. ಅಪರಾಧಿಗಳು ತಪ್ಪಿಸಿಕೊಳ್ಳಲು ಬಿಡಬಾರದು ಎಂದರು.
ರಾಷ್ಟ್ರದ ಭದ್ರತೆದೃಷ್ಟಿಯಿಂದ ಆಧಾರ್, ಚುನಾವಣಾ ಗುರುತಿನ ಚೀಟಿ, ಪ್ಯಾನ್‌ಕಾರ್ಡ್ ನಕಲಿ ಸೃಷ್ಟಿ ಜಾಲ ಬೇಧಿಸುವ ಅಗತ್ಯವಿದ್ದು, ಸಿಬಿಐ ಅಥವಾ ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂದು ಸುರೇಶಕುಮಾರ್ ಒತ್ತಾಯಿಸಿದರು.
ಹೆಬ್ಬಾಳ ಪೊಲೀಸ್ ಠಾಣೆಯ ಎ್ಐಆರ್ ಪ್ರಕಾರ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಪೊಲೀಸ್ ಇನ್ಸ್‌ಪೆಕ್ಟರ್ ಅ.19ರಂದು ಆರ್‌ಟಿ ನಗರದ ಸುಲ್ತಾನಪಾಳ್ಯ ಬನಶಂಕರಿ ಕಾಂಪ್ಲೆಕ್ಸ್‌ನ ಎಂಎಸ್‌ಎಲ್ ಟೆಕ್ನೊ ಸೊಲ್ಯೂಶನ್ಸ್‌ನಲ್ಲಿ ಗುರುತಿನ ಚೀಟಿಗಳನ್ನು ಸಿದ್ಧಪಡಿಸಲಾಗುತ್ತಿತ್ತು.
ಆಧಾರ್, ಚುನಾವಣಾ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ದಾಖಲಾತಿಗಳನ್ನು ಕಂಪ್ಯೂಟರ್‌ನಲ್ಲಿ ಸುಳ್ಳು ಸೃಷ್ಟಿ ಮಾಡಿ ತಮ್ಮ ಸ್ವಂತ ಲಾಭಕ್ಕಾಗಿ ಸಾರ್ವಜನಿಕರು, ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದವರಿಗೆ ಸಹಕರಿಸುತ್ತಿದ್ದರು. ಹೆಚ್ಚಿನ ಹಣಕ್ಕೆ ನೀಡಿ ಸರ್ಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ.
ಎಂಎಸ್‌ಎಲ್ ಟೆಕ್ನೊ ಮಾಲೀಕ ಮೌನೇಶ್ ಕುಮಾರ್, ಈತನ ಕೃತ್ಯಕ್ಕೆ ಸಹಕರಿಸಿದ ಭಗತ್, ರಾಘವೇಂದ್ರ ವಿರುದ್ಧ ಬಿಗಿ ಕಾನೂನು ಕ್ರಮಕೈಗೊಳ್ಳಬೇಕು. ಈ ಮೂವರೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ನಿಕಟವರ್ತಿಗಳಾಗಿದ್ದಾರೆ ಎಂದು ಆರೋಪಿಸಿದರು.
ದುಷ್ಕೃತ್ಯ ಹೊರಬಿದ್ದ ಮೇಲೆ ಮೂವರಿಂದ ದೂರ ಅಂತರ ಕಾಯ್ದುಕೊಳ್ಳುವ ಹೇಳಿಕೆಯು ಬೈರತಿ ಸುರೇಶ್ ಅವರಿಂದ ಹೊರಬಿದ್ದಿದೆ. ಆದರೆ ಮೂವರ ಜತೆಗಿರುವ ನಂಟು ಮತ್ತು ಆಪ್ತತೆ ಬಗ್ಗೆ ಹೆಬ್ಬಾಳ ಕ್ಷೇತ್ರಾದ್ಯಂತ ಮಾತಾಡಿಕೊಳ್ಳುತ್ತಿದೆ. ಮೌನೇಶ್ ಕುಮಾರ್ ದ್ವಿಚಕ್ರವಾಹದ ಹಿಂಬದಿ ಬೈರತಿ ಸುರೇಶ್ ಕುಳಿತು ಸವಾರಿ ಮಾಡುತ್ತಿರುವ ೆಟೊಗಳಿವೆ ಎಂದರು.
ಕ್ಷೇತ್ರದ ಪರಾಜಿತ ಅಭ್ಯರ್ಥಿ ಕಟ್ಟಾ ಜಗದೀಶ್ ಬಹಳ ಹಿಂದಿನಿಂದ ಚುನಾವಣಾ ಗುರುತಿನ ಚೀಟಿ ನಕಲಿ ಸೃಷ್ಟಿ ಜಾಲವಿದೆ ಎಂದು ದೂರುತ್ತಾ ಬಂದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಕೋರಿ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಬೈರತಿ ಸುರೇಶ್ ಆಡಳಿತ ಪಕ್ಷದ ಕಟ್ಟಾಳು, ಸಿಎಂ ಸಿದ್ದರಾಮಯ್ಯ ನಿಕಟವರ್ತಿ ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದು, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಗಾಂಭೀರ್ಯ ತೋರಲಿ ಎಂದು ಎಸ್.ಸುರೇಶಕುಮಾರ್ ಆಗ್ರಹಿಸಿದರು.