ಜಿಲ್ಲೆ

ನಕಲಿ ಜಾತಿ ಪತ್ರ ಪಡೆದು ಸ್ಪರ್ಧೆಯ ಆರೋಪ

ಸುನಿಲ್ ಪೊನ್ನೇಟಿ

ಕುಶಾಲನಗರ:

ಸುಮಾರು 6 ದಶಕಗಳಿಂದ ಗಿರಿಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಸವನಹಳ್ಳಿಯ ಲ್ಯಾಂಪ್ಸ್ ಸೊಸೈಟಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ನಕಲಿ ಜಾತಿ ದೃಢೀಕರಣ ಪತ್ರ ಹೊಂದಿರುವ ವ್ಯಕ್ತಿಯೊಬ್ಬರು ಸ್ಪರ್ಧಿಸುತ್ತಿದ್ದಾರೆ ಎಂದು ಸೋಲಿಗ ಸಮುದಾಯದ ಜಿಲ್ಲಾಧ್ಯಕ್ಷ ಬಿ.ಬಿ. ಮಹೇಶ್ ಆರೋಪಿಸಿದ್ದಾರೆ.

ಲ್ಯಾಂಪ್ಸ್ ಸೊಸೈಟಿ ಗಿರಿಜನರಿಗೋಸ್ಕರ ಇರುವ ಸಂಸ್ಥೆ ಆಗಿದೆ. ಈ ಸಂಸ್ಥೆಯ ಅಭಿವೃದ್ಧಿಗಾಗಿ ಹಲವು ಹಿರಿಯರು ಶ್ರಮಿಸಿದ್ದಾರೆ. ಲಾಭದಾಯಕವಾಗಿ ನಡೆಯುತ್ತಿದ್ದ ಈ ಸಂಸ್ಥೆಯಲ್ಲಿ ಆದಿವಾಸಿ ಅಲ್ಲದ ವ್ಯಕ್ತಿಯೊಬ್ಬರು ನಕಲಿ ಜಾತಿ ದೃಢೀಕರಣ ಪತ್ರ ಪಡೆದು ಸ್ಪರ್ಧಿಸಿ ಈ ಹಿಂದೆ ಗೆದ್ದಿದ್ದರು. ಇದೀಗ 2025ರಲ್ಲಿ ಮತ್ತೆ ಚುನಾವಣೆ ಬಂದಿದ್ದು ಈ ಬಾರಿಯೂ ನಕಲಿ ಜಾತಿ ದೃಢೀಕರಣ ಪತ್ರ ಹೊಂದಿರುವವರು ಸ್ಪರ್ಧೆ ಮಾಡುತ್ತಿದ್ದಾರೆ. ಈ ಮೂಲಕ ನೈಜ ಆದಿವಾಸಿಗಳಿಗೆ ಸಿಗಬೇಕಾದ ಅವಕಾಶ ತಪ್ಪಿಸುತ್ತಿದ್ದಾರೆ. ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರೆ. ಅಧಿಕಾರಿಗಳ ಈ ಧೋರಣೆ ಖಂಡಿಸಿ ಕುಶಾಲನಗರದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಲ್ಯಾಂಪ್ಸ್ ಸೊಸೈಟಿ ಮಾಜಿ ಅಧ್ಯಕ್ಷ ಆರ್.ಕೆ. ಚಂದ್ರು ಮಾತನಾಡಿ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಸರಿಯಾದ ದಾಖಲಾತಿ ಕೊಡದ ಕಾರಣ ನೈಜ ಆದಿವಾಸಿಗಳಿಗೆ ಅನ್ಯಾಯ ಆಗಿದೆ. ಅಧಿಕಾರಿಗಳು ಸುಳ್ಳು ದಾಖಲಾತಿ ಮಾಡಿಸಿಕೊಂಡಿರುವವರ ಪರ ಇದ್ದಾರೆ. ಇಲ್ಲಿ ಚುನಾವಣೆ ಘೋಷಣೆ ಆಗಿದ್ದೇ ಸದಸ್ಯರಿಗೆ ಗೊತ್ತಾಗಿಲ್ಲ. ಮೊದಲೇ ಗೊತ್ತಿದ್ದರೆ ಚುನಾವಣೆ ತಡೆಯುವ ಪ್ರಯತ್ನ ಮಾಡಬಹುದಿತ್ತು. ಅಧಿಕಾರಿಗಳ ನಡೆಯಿಂದ ನೈಜ ಆದಿವಾಸಿಗಳಿಗೆ ಅನ್ಯಾಯ ಆಗುತ್ತಿದೆ. ಅನರ್ಹರಿಗೆ ನೀಡಿರುವ ಜಾತಿ ಪ್ರಮಾಣ ಪತ್ರ ರದ್ದು ಮಾಡಬೇಕು. ಈ ಸಂಬAಧ ವಿಧಾನಸೌಧದಿಂದ ರಾಜಭವನ ತನಕ ಪಾದಯಾತ್ರೆ ನಡೆಸಿ ರಾಜ್ಯಪಾಲರ ಗಮನ ಸೆಳೆಯಲಾಗುವುದು ಎಂದರು.

ಜೇನು ಕುರುಬರ ಅಭಿವೃದ್ಧಿ ಸಂಘದ ಸಂಘಟನಾ ಕಾರ್ಯದರ್ಶಿ ಜೆ.ಟಿ. ಕಾಳಿಂಗ, ಸೊಲಿಗರ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಬಿ.ಹೆಚ್ .ಸಿದ್ದಲಿಂಗ, ಅರಣ್ಯ ಹಕ್ಕು ಸಮಿತಿ ಮುಖಂಡ ಜೆ.ಎನ್. ವಸಂತ, ಪ್ರಮುಖರಾದ ಜೆ.ಕೆ. ನಂಜಯ್ಯ ಸುದ್ದಿಗೋಷ್ಠಿಯಲ್ಲಿ ಇದ್ದರು.