ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯನ್ನು ಬೆಸೆಯುವಲ್ಲಿ ಜಾತ್ರೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಾಪಂ ಮಾಜಿ ಅಧ್ಯಕ್ಷ ಬಸವರಾಜ ಗುಂಡಗೋವಿ ಅಭಿಪ್ರಾಯಪಟ್ಟರು.
ತಾಲೂಕಿನ ಮನಗುಂಡಿ ಗ್ರಾಮದಲ್ಲಿ ಆರಂಭವಾಗಿರುವ ಗ್ರಾಮ ದೇವಿಯರ ಜಾತ್ರಾ ಮಹೋತ್ಸವದ 3ನೇ ದಿನ ಏರ್ಪಡಿಸಿದ್ದ ಹನಮಂತ ದೇವರ ರಥೋತ್ಸವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇವರ ಮೇಲಿನ ನಂಬಿಕೆಯು ಪೂರ್ವಜರ ಕಾಲದಿಂದ ನಿರಂತರವಾಗಿ ಸಾಗಿ ಬಂದಿದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಹಬ್ಬ, ಜಾತ್ರೆಗಳಲ್ಲಿ ಎಲ್ಲರು ಭಾಗವಹಿಸುವುದರಿಂದ ಸಹಬಾಳ್ವೆ ಸಾಧಿಸಲು ಪೂರಕವಾಗುತ್ತದೆ. ಜತೆಗೆ ಆರ್ಥಿಕ, ಸಾಮಾಜಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದರು.
ಕರೆಪ್ಪ ಅಮ್ಮಿನಭಾವಿ ಮಾತನಾಡಿ, 10ನೇ ಶತಮಾನದಲ್ಲಿ ಚಾಲುಕ್ಯರ ಆಡಳಿತದಲ್ಲಿದ್ದ ಮನಗುಂಡಿ ಗ್ರಾಮಕ್ಕೆ ಸಾವಿರಾರು ವರ್ಷಗಳ ಪರಂಪರೆ ಇದೆ. ಗ್ರಾಮದಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಿದ ದೇವಾಲಯಗಳೇ ಇದಕ್ಕೆ ನಿದರ್ಶನ. ಈ ಕುರಿತು ಪ್ರಾಚ್ಯವಸ್ತು ಇಲಾಖೆ ಬಳಿ ಆಧಾರಗಳಿವೆ. ಅನೇಕ ಸಂಶೋಧಕರಿಂದಲೂ ಮನಗುಂಡಿ ಗ್ರಾಮದ ಇತಿಹಾಸ ದಾಖಲಾಗಿವೆ. ಈವರೆಗೂ ಗ್ರಾಮ ದೇವಿಯರ ಜಾತ್ರೆ ನಡೆದ ಮಾಹಿತಿ ಇಲ್ಲ. ಆದರೆ ಮನಗುಂಡಿ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ದೇವಿಯರ ಜಾತ್ರೆ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.
ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಸದಸ್ಯರಾದ ಗಂಗಾಧರ ಕಲ್ಲಗೌಡತಿ, ಪುಂಡಲೀಕ ಜಕ್ಕನವರ, ಹಿರಿಯರಾದ ಯಲ್ಲಪ್ಪ ಹುತ್ತಕ್ಕನವರ, ಪರಮೇಶ ಸಲಗಾರ, ನಾಗಪ್ಪ ಅಮ್ಮಿನಭಾವಿ, ನಿಂಗಪ್ಪ ಸಾಲಗಟ್ಟಿ, ಗಂಗಾಧರ ರಾಜಾಪುರ, ಬಸಪ್ಪ ಮೇಟಿ, ಇತರರು ಇದ್ದರು.
ಮಂಜುನಾಥ ಕಳ್ಳಿಮನಿ ನಿರೂಪಿಸಿದರು. ಶಿವಾನಂದ ಸಾಲಗಟ್ಟಿ ವಂದಿಸಿದರು. ಬಳಿಕ ಸಂಭ್ರಮದಿಂದ ಹನಮಂತ ದೇವರ ರಥೋತ್ಸವ ಜರುಗಿತು.