ಗೋಕಾಕ: ಅಡಿಬಟ್ಟಿ ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸಿ ಮುಂಬರುವ ದಿನಗಳಲ್ಲಿ ಗ್ರಾಮದ ಮುಖ್ಯರಸ್ತೆಯಿಂದ ವಿಠ್ಠಪ್ಪ ಗುಡಿಯವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಅಡಿಬಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಠ್ಠಪ್ಪ ದೇವರ ಜಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮಸ್ಥರು ಮೊದಲಿನಿಂದಲೂ ವಿಶ್ವಾಸ ಇಟ್ಟುಕೊಂಡು ಆಶೀರ್ವಾದ ಮಾಡುತ್ತ ಬರುತ್ತಿದ್ದಾರೆ. ಪ್ರತಿಯೊಂದು ಚುನಾವಣೆಯಲ್ಲಿ ಹೆಚ್ಚಿನ ಮತ ನೀಡುತ್ತ ಬರುತ್ತಿದ್ದಾರೆ. ಜಾತ್ರೆಗಳು ನಮ್ಮ ಸಂಸ್ಕೃತಿ ಬಿಂಬಿಸುತ್ತಿವೆ. ಜಾತ್ಯತೀತ ಮನೋಭಾವಕ್ಕೆ ಜಾತ್ರೆಗಳು ಸಾಕ್ಷ್ಯವಾಗಿವೆ. ನಮ್ಮ ಆಚಾರ-ವಿಚಾರಗಳನ್ನು ಯುವಪೀಳಿಗೆಗೆ ಅರಿವು ಮೂಡಿಸುವಲ್ಲಿ ಹಿರಿಯರು ಮಾಡುತ್ತಿರುವ ಕಾರ್ಯವು ಪ್ರಶಂಸನೀಯ ಎಂದರು.
ಶಾಸಕರನ್ನು ದೇವಸ್ಥಾನದ ಕಮಿಟಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಸಿದ್ದಪ್ಪ ಹಂಜಿ, ಮೆಳವಂಕಿ ಗ್ರಾಪಂ ಮಾಜಿ ಅಧ್ಯಕ್ಷೆ ಯಲ್ಲವ್ವ ಶಿಂತ್ರಿ, ಶಿವಾನಂದ ಬಸಳಿಗುಂದಿ, ಕೆಂಚಪ್ಪ ಶಿಂತ್ರಿ, ನಿಂಗಪ್ಪ ಶಿಂತ್ರಿ, ಅಡಿವೆಪ್ಪ ಕಂಕಾಳಿ, ಡಾ.ಅಡಿವೆಪ್ಪ ಭಂಗಿ, ವಿಠ್ಠಪ್ಪ ಬಸಳಿಗುಂದಿ, ನಾಗಪ್ಪ ಕಾಪಶಿ ಇತರರಿದ್ದರು.