ಜಿಲ್ಲೆ

ರಾಜ್ಯ ಸರ್ಕಾರ ವಿರುದ್ಧ ನ್ಯಾಯಬೆಲೆ ಅಂಗಡಿ ಮಾಲೀಕರ ಆಕ್ರೋಶ

ಬೆಂಗಳೂರು: ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಕಾರ್ಡ್‌ದಾರರಿಗೆ ಅಕ್ಕಿ ಬದಲು ಹಣ ನೀಡುತ್ತಿರುವುದನ್ನು ವಿರೋಧಿಸಿ ಬೆಂಗಳೂರು ನಗರ ಸರ್ಕಾರಿ ಪಡಿತರ ವಿತರಕರ ಹಿತರಕ್ಷಣಾ ಸಂಘ, ಗುರುವಾರ ಕನ್ನಿಂಗ್‌ಹ್ಯಾಮ್ ರಸ್ತೆಯ ಆಹಾರ ಇಲಾಖೆ ಆಯುಕ್ತರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತ್ತು.

ಸಂಘದ ಅಧ್ಯಕ್ಷ ಜೆ.ಬಿ.ಕುಮಾರ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ, ಇಲಾಖೆ ಆಯುಕ್ತೆ ಕನಗವಲ್ಲಿ, ಅಪರ ನಿರ್ದೇಶಕ ಪೋತರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಡ್‌ದಾರರಿಗೆ ಉಚಿತವಾಗಿ 10 ಕೆ.ಜಿ.ಅಕ್ಕಿ ವಿತರಿಸುವುದಾಗಿ ಗ್ಯಾರಂಟಿ ಯೋಜನೆ ಘೋಷಿಸಿತ್ತು. ಅದರಂತೆ, ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು ಐದೂವರೆ ತಿಂಗಳು ಕಳೆದರೂ ಅಕ್ಕಿ ವಿತರಿಸಲು ವಿಫಲವಾಗಿದೆ. ದಿನದಿಂದ ದಿನಕ್ಕೆ ಯೋಜನೆಯ ಮಹತ್ವ ಕಳೆದುಕೊಳ್ಳುತ್ತಿದೆ. ಅಕ್ಕಿ ಸಿಗದ ಪರಿಣಾಮ ಕಾರ್ಡ್‌ದಾರಿಗೆ ಹಣ ನೀಡುತ್ತಿರುವುದರಿಂದ ಪಡಿತರ ವಿತರಣೆಗೆ ನೀಡಲಾಗುವ ಕಮಿಷನ್ ಹಣ ಖೋತಾವಾಗಿದೆ. ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಗರೀಬ್‌ಕಲ್ಯಾಣ ಅನ್ನ ಯೋಜನೆಯಡಿ ನೀಡಲಾಗುತ್ತಿರುವ ಅಕ್ಕಿಗೆ ಮಾತ್ರ ನಮಗೆ ಕಮಿಷನ್ ಹಣ ಸಿಗುತ್ತಿದೆ ಎಂದು ಜೆ.ಬಿ.ಕುಮಾರ್ ಹೇಳಿದ್ದಾರೆ.

ಹಲವು ಸಮಸ್ಯೆಗಳನ್ನು ಮಾಲೀಕರು ಎದುರಿಸುತ್ತಿದ್ದಾರೆ. ಹಲವು ವರ್ಷಗಳಿಂದ ಕೋಟ್ಯಂತರ ರೂ. ಕಮಿಷನ್ ಹಣ, ರೇಷನ್ ಕಾರ್ಡ್‌ಗೆ ಆಧಾರ್ ಜೋಡಣೆ(ಇಕೆವೈಸಿ) ಮಾಡಿರುವುದಕ್ಕೆ ನೀಡಲಾಗುವ ಕಮಿಷನ್ ಹಣವು ಬಾಕಿ ಉಳಿದಿದೆ. ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಯೋಜನೆ ನಿಲ್ಲಿಸಬೇಕು. ಅನಗತ್ಯವಾಗಿ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಬಾರದು. ನ್ಯಾಯಬೆಲೆ ಅಂಗಡಿಗಳನ್ನು ಸಹಕಾರ ಸಂಘಗಳಾಗಿ ಪರಿವರ್ತಿಸಬೇಕು. ಸರ್ಕಾರದಿಂದ ಪ್ರಿಂಟರ್ ನೀಡಿದರೆ ಮಾತ್ರವೇ ಕಾರ್ಡ್‌ದಾರರಿಗೆ ರಸೀದಿ ನೀಡುವ ಆದೇಶವನ್ನು ಪಾಲಿಸಲಾಗುವುದು ಎಂದು ಜೆ.ಬಿ.ಕುಮಾರ್ ವಿವರಿಸಿದರು.