ಜಿಲ್ಲೆ

ಇಟಗಿ ಭೀಮಾಂಬಿಕಾದೇವಿ ಜಾತ್ರೆ ರದ್ದು

Gadag

ರೋಣ: ಕರೊನಾ ಹಿನ್ನೆಲೆಯಲ್ಲಿ ತಾಲೂಕಿನ ಇಟಗಿಯ ಭೀಮಾಂಬಿಕಾ ದೇವಿ ಜಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಇಟಗಿ ತಾಪಂ ಸದಸ್ಯ ಪ್ರಭು ಮೇಟಿ ಮಾತನಾಡಿ, ಹತ್ತು ಹೆಜ್ಜೆಯಾದರು ತೇರು ಎಳೆಯಲು ಅನುಮತಿ ನೀಡುವಂತೆ ಮನವಿ ಮಾಡಿದರು. ಮನವಿಯನ್ನು ನಿರಾಕರಿಸಿದ ತಹಸೀಲ್ದಾರ್, ರಥ ಎಳೆಯುವುದೆಂದರೆ ಸಹಜವಾಗಿ ಜನದಟ್ಟಣೆಯಾಗುತ್ತದೆ. ಇದರಿಂದಾಗಿ ಸರ್ಕಾರದ ಕೋವಿಡ್ ನಿಯಮ ಉಲ್ಲಂಘನೆಯಾಗುತ್ತದೆ ಹಾಗಾಗಿ ರಥ ಎಳೆಯವುದು ಬೇಡ ಎಂದರು.

ದೇವಸ್ಥಾನದ ಧರ್ಮಾಧಿಕಾರಿ ವಿ.ಬಿ. ಧರ್ಮರ ಮಾತನಾಡಿ, ಸರ್ಕಾರ ಸೂಚಿಸಿರುವ ಮಾರ್ಗಸೂಚಿಯನ್ನು ಪಾಲಿಸಿ, ಕರೊನಾ ಸೋಂಕು ಮುಕ್ತಿಗಾಗಿ ಭೀಮಾಂಭಿಕಾ ದೇವಿಯ ಭಕ್ತರು ಮನೆಯಲ್ಲಿಯೇ ಪ್ರಾರ್ಥನೆ ಮಾಡಿ, ಮುಂದಿನ ದಿನಗಳ ಸುಭೀಕ್ಷ್ಷೆಗಾಗಿ ಸರ್ಕಾರದ ಆದೇಶವನ್ನು ಪಾಲಿಸಬೇಕು ಎಂದರು.

ಸಿಪಿಐ ಸುನೀಲ ಸೌದಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಇಟಗಿ ಗ್ರಾಮದ ಹಿರಿಯರು ಸಭೆಯಲ್ಲಿ ಪಾಲ್ಗೊಂಡಿದ್ದರು.