ಕಂಪ್ಲಿ ತಾಲೂಕಿನ ಇಟಗಿ ಗ್ರಾಮದ ಬಳಿ ಹರಿದಿರುವ ನಾರಿಹಳ್ಳದ ಸೇತುವೆ ಮುಳುಗಿರುವುದು. 
ಜಿಲ್ಲೆ

ಮೂರ್ಛೆ ಬಂದು ನೀರಿಗೆ ಬಿದ್ದವನ ರಕ್ಷಣೆ

ನರೇಶ್ ಕುಮಾರ್

ಕಂಪ್ಲಿ: ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಗೆ ಬಿದ್ದ ಮೀನುಗಾರನನ್ನು ನಾಲ್ವರು ಸಹ ಮೀನುಗಾರರು ರಕ್ಷಿಸಿದ್ದಾರೆ.

ಕೋಟೆಯ ನದಿ ಸೇತುವೆ ಬಳಿ ವೆಂಕಟರಮಣ ದೇವಸ್ಥಾನ ಬಳಿ ನಿಂತಿದ್ದ ಕರ್ಪಣ್ಣ(35) ಮೂರ್ಛೆ(ಪಿಟ್ಸ್)ಬಂದು ನದಿಗೆ ಬಿದ್ದಿದ್ದಾನೆ. ತಕ್ಷಣ ಅಲ್ಲಿದ್ದ ಮೀನುಗಾರರಾದ ಮಣಿರತ್ನಂ, ರಾಜೇಶ್, ಮೆಹಬೂಬ್, ಅರುಣ್ ತಕ್ಷಣ ನದಿಗೆ ಧುಮಿಕಿ ಮೂರ‌್ನಾಲ್ಕು ನಿಮಿಷಗಳ ಕಾಲ ಹುಡುಕಾಡಿ ಕರ್ಪಣ್ಣನನ್ನು ದಡಕ್ಕೆ ತಂದು, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು.

ಆಸ್ಪತ್ರೆಯಲ್ಲೂ ಎರಡು ಬಾರಿ ಪಿಟ್ಸ್ ಕಾಣಿಸಿಕೊಂಡಿದ್ದರಿಂದ ಚುಚ್ಚುಮದ್ದು ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಬಿಮ್ಸ್‌ಗೆ ಕಳಿಸಲಾಗಿದೆ ಎಂದು ಡಾ.ನಂದೀಶ್ ತಿಳಿಸಿದರು. ಆಸ್ಪತ್ರೆಗೆ ಧಾವಿಸಿ ವಿಚಾರಿಸಿದ ತಹಸೀಲ್ದಾರ್ ಶಿವರಾಜ ನಂತರ ಮಾತನಾಡಿ, ನದಿ ದಡದ ಬಳಿ ಯಾವ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಬಿಗಿ ಬಂದೋಬಸ್‌ವಹಿಸಲು ಪೊಲೀಸರಿಗೆ ಸೂಚಿಸಲಾಗುವುದು ಎಂದರು.

ಹಿನ್ನೀರಿಗೆ ಮುಳುಗಿದ ನಾರಿಹಳ್ಳ ಬ್ರಿಡ್ಜ್: ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಕಂಪ್ಲಿ-ಇಟಗಿ ಮಾರ್ಗದ ನಾರಿಹಳ್ಳದ ಸೇತುವೆ ನದಿಯ ಹಿನ್ನೀರಿನಲ್ಲಿ ಮುಳುಗಿ ಸಂಚಾರ ಸ್ಥಗಿತಗೊಂಡಿದೆ. ಸುತ್ತಲಿನ ಗ್ರಾಮಸ್ಥರು, ರೈತರು, ಕಾರ್ಮಿಕರ ಓಡಾಟಕ್ಕೆ ತೊಂದರೆಯಾಗಿದೆ.ಎಮ್ಮಿಗನೂರು ಮೂಲಕ ಇಟಗಿ ಗ್ರಾಮಕ್ಕೆ 10ಕಿಮೀ ಕ್ರಮಿಸಿ ತಲುಪಬೇಕಿದೆ.

ಪಂಪ್‌ಸೆಟ್ ಮೋಟಾರ್‌ಗಳ ತೆರವು
ಇಟಗಿ ಸಮೀಪದ ನಂ.2 ಮುದ್ದಾಪುರ ವ್ಯಾಪ್ತಿಯ ಶಂಕರಚಾರಿ ಮಡುವಿನಲ್ಲಿನ ರೈತರ ಕೆಲ ಪಂಪ್‌ಸೆಟ್ ಮೋಟಾರ್‌ಗಳು ನದಿ ನೀರಿನಲ್ಲಿ ಮುಳುಗಿವೆ. ಇಲ್ಲಿ ಸುಮಾರು 200 ಪಂಪ್‌ಸೆಟ್ ಮೋಟಾರ್‌ಗಳನ್ನು ಅಳವಡಿಸಿದ್ದು, ತೊಯ್ದಿವೆ. ಕೆಲ ರೈತರು ಮೋಟಾರ್‌ಗಳನ್ನು ತೆರವುಗೊಳಿಸಿ ಸುರಕ್ಷಿತ ಸ್ಥಳದಲ್ಲಿ ಬಿಚ್ಚಿಟ್ಟಿದ್ದಾರೆ. ಕೆಲವು ಕೆಟ್ಟಿದ್ದು, ರೈತರಿಗೆ ಹೊರೆಯಾಗಿದೆ. .