ಮೈಸೂರು: ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಪ್ತಚರ ಇಲಾಖೆಯ ವೈಫಲ್ಯವನ್ನು ಮುಖ್ಯಮಂತ್ರಿ ಮೊದಲು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.
ಇದು ಭಯೋತ್ಪಾದಕರ ಕೃತ್ಯ. ಆ ಹೋಟೆಲ್‌ನಲ್ಲಿ ಮಕ್ಕಳು ಪಟಾಕಿ ಸಿಡಿಸಿದ್ದಾರೆಯೇ ಅಥವಾ ಬಲೂನ್‌ನಲ್ಲಿ ಆಡಿದ್ದಾರೆಯೇ? ಅಲ್ಲಿ ಆಗಿರುವುದು ಬಾಂಬ್ ಸ್ಫೋಟ. ಹೀಗಾಗಿ, ಭಯೋತ್ಪಾದಕರ ಕೃತ್ಯವಲ್ಲದೇ ಮತ್ತೇನು? ಭಯೋತ್ಪಾದಕರನ್ನು ಮೊದಲು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ಅವರು ಭಯೋತ್ಪಾದಕರ ಪರ ಎಂಬುದು ನಮಗೆ ತಿಳಿದಿದೆ. ಅವರ ಮೇಲೆ ಯಾವ ನಂಬಿಕೆಯೂ ಉಳಿದಿಲ್ಲ. ಅವರ ಬಾಯಿಗೆ ಬೀಗ ಹಾಕಬೇಕು ಎಂದು ಹರಿಹಾಯ್ದರು.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಪ್ರಕರಣದ ವಿಧಿವಿಜ್ಞಾನ ವರದಿಯನ್ನು ಸರ್ಕಾರ ಬಹಿರಂಗಪಡಿಸಬೇಕು. ತಡ ಮಾಡಿದಷ್ಟೂ ವರದಿ ತಿರುಚುತ್ತಿದ್ದಾರೆ ಎಂಬ ಶಂಕೆ ಹೆಚ್ಚಾಗುತ್ತದೆ. ಅಂತಹ ಘಟನೆ ನಡೆದೇ ಇಲ್ಲ ಎಂದು ಕೆಲ ಸಚಿವರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಹೀಗಾಗಿ ಆ ವರದಿಗೆ ಏನು ಬೆಲೆ ಎಂದು ಪ್ರಶ್ನಿಸಿದರು.
ನಮ್ಮ ಪ್ರಕಾರ ಈಗಾಗಲೇ ಎಫ್‌ಎಲ್‌ಸಿ ವರದಿ ಬಂದಿದೆ. ಸರ್ಕಾರ ಅದನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ ಎಂದು ಆಪಾದಿಸಿದರು.
ಜನರು ಆ ವರದಿ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಆದರೆ, ನೀವು ಮುಸ್ಲಿಮರ ಪರವಾಗಿಯೇ ಇರಿ. ಆದರೆ, ಭಯೋತ್ಪಾದಕ ಚಟುವಟಿಕೆ ನಡೆಸುವವರು ಹಾಗೂ ದೇಶದ್ರೋಹಿಗಳನ್ನು ರಕ್ಷಿಸಬೇಡಿ ಎಂದು ಮುಂಖ್ಯಮಂತ್ರಿಯನ್ನು ಕೋರಿದರು.
ಮುಖ್ಯಮಂತ್ರಿಗೆ ತಾಕತ್ತಿದ್ದರೆ ಮೊದಲು ಜಾತಿ ಗಣತಿ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಲಿ. ಬಳಿಕ ವಿಧಾನಸೌಧದಲ್ಲಿ ಚರ್ಚೆಗೆ ಇಡಲಿ. ಆಗ ನೋಡಿ ಕಾಂಗ್ರೆಸ್‌ನವರೇ ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಜಾತಿ, ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಚಾಂಪಿಯನ್ ಎನಿಸಿಕೊಳ್ಳಲು ಹಿಂದು ಸಮಾಜವನ್ನು ಜಾತಿ ಹೆಸರಿನಲ್ಲಿ ಒಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯವರು 50 ಕೋಟಿ ರೂ. ಆಫರ್ ಮಾಡುತ್ತಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಯಿಂದ ಈ ರೀತಿ ಹೇಳಿಕೆ ಬರಬಾರದು. ಹೇಳಿದ ಮೇಲೆ ಸಾಕ್ಷಿ ಕೊಡಬೇಕು. 50 ಕೋಟಿ ರೂ. ಆಫರ್ ಕೊಟ್ಟಿದ್ದು ಯಾರೆಂಬುದನ್ನು ಮೊದಲು ಬಹಿರಂಗಪಡಿಸಲಿ. ಹಾಗೆ ಮಾಡಿದವರನ್ನು ಜೈಲಿಗೆ ಹಾಕಲಿ. ಇಲ್ಲದಿದ್ದರೆ ನಾನು ರಾಜಕೀಯ ಕಾರಣದಿಂದಾಗಿ ಸುಳ್ಳು ಹೇಳಿದ್ದೇನೆ ಎಂದು ಜನರ ಕ್ಷಮೆ ಕೇಳಲಿ ಎಂದು ಒತ್ತಾಯಿಸಿದರು.
ರಾಜ್ಯಸಭಾ ಚುನಾವಣೆಯಲ್ಲಿ ಮತ ಹಾಕಿಸಿಕೊಳ್ಳಲು ಶಾಸಕ ಎಸ್.ಟಿ. ಸೋಮಶೇಖರ್ ಅವರಿಗೆ ಎಷ್ಟು ನೂರು ಕೋಟಿ ರೂ. ನೀಡಲಾಗಿದೆ? ಶಿವರಾಮ್ ಹೆಬ್ಬಾರ್ ಮತ ಚಲಾಯಿಸದಂತೆ ತಡೆಯಲು ಎಷ್ಟು ಹಣ ಕೊಟ್ಟಿದ್ದೀರಿ ಎನ್ನುವುದನ್ನು ತಿಳಿಸಿ ಎಂದು ಜರಿದರು.