ಶಿವಮೊಗ್ಗ: ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಫ್ಯಾಕ್ಟರಿಯೊಂದರಲ್ಲಿ ಜೂ.30ರಂದು 1.40 ಲಕ್ಷ ರೂ. ಮೌಲ್ಯದ ಸ್ಟೀಲ್ ಎರಕದ ಉತ್ಪನ್ನಗಳನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಶಿವಮೊಗ್ಗ ಹಾಗೂ ಭದ್ರಾವತಿಯ ನಾಲ್ವರನ್ನು ಬಂಧಿಸಿದ್ದಾರೆ.
ಈ ಪ್ರಕರಣದ ವಿಚಾರಣೆಗಾಗಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಪೊಲೀಸ್ ತಂಡವೊಂದನ್ನು ರಚಿಸಿದ್ದರು. ತನಿಖೆ ನಡೆಸಿದ ತಂಡ ಭದ್ರಾವತಿ ತಾಲೂಕು ಜೇಡಿಕಟ್ಟೆ ಹೊಸೂರಿನ ಎಸ್.ಗಂಗಾಧರ್(28), ಶಿವಮೊಗ್ಗ ಟ್ಯಾಂಕ್ ಮೊಹಲ್ಲಾದ ಮಹಮದ್ ಇಮ್ರಾನ್ ಖಾನ್ (35), ನಂಜಪ್ಪ ಲೇಔಟ್ ಮದಾರಿಪಾಳ್ಯದ ಮಹಮದ್ ಹಪೀಜುಲ್ಲಾ(33) ಹಾಗೂ ಭದ್ರಾವತಿ ತಾಲೂಕು ದೊಣಬಘಟ್ಟದ ಮುಷ್ತಾಕಿಂ ಮುಸ್ತು (22) ಬಂಧಿತ ಆರೋಪಿಗಳು. ಕಳ್ಳತನವಾದ ವಸ್ತುಗಳೊಂದಿಗೆ ಅದರ ಸಾಗಣೆಗೆ ಬಯಸಿದ 5 ಲಕ್ಷ ರೂ. ಮೌಲ್ಯದ ಗೂಡ್ಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಈ ತನಿಖಾ ತಂಡದ ನೇತೃತ್ವವನ್ನು ಭದ್ರಾವತಿ ನಗರ ಸಿಪಿಐ ಶ್ರೀಶೈಲ ಕುಮಾರ ವಹಿಸಿದ್ದರು. ನ್ಯೂಟೌನ್ ಪಿಎಸ್‌ಐ ಟಿ.ರಮೇಶ್, ಎಎಸ್‌ಐ ಟಿ.ಪಿ.ಮಂಜಪ್ಪ, ಮುಖ್ಯಪೇದೆಗಳಾದ ನವೀನ್, ರಾಘವೆಂದ್ರ ಮತ್ತು ಪೇದೆ ಪ್ರಸನ್ನ ತಂಡದಲ್ಲಿದ್ದರು.