ಗೌರಿಬಿದನೂರು : ವಾಹನ ಪರವಾನಗಿ, ತರಬೇತಿ ಎರಡೂ ಇಲ್ಲದ ಚಾಲಕರು, ವಿಮೆ ಇಲ್ಲದ ವಾಹನಗಳು, ಮದ್ಯ ಸೇವಿಸಿ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವುದು.... ಇದು ತಾಲೂಕಿನಾದ್ಯಂತ ಕಾರ್ಮಿಕರನ್ನು ಕಾರ್ಖಾನೆಗಳಿಗೆ ಕರೆದೊಯ್ಯುವ ವಾಹನಗಳ ಬಗ್ಗೆ ಕೇಳಿಬರುತ್ತಿರುವ ದೂರುಗಳು.
ಪ್ರತಿನಿತ್ಯ 25ಕ್ಕೂ ಹೆಚ್ಚು ವಾಹನಗಳಲ್ಲಿ ನಗರ ಸೇರಿ ತಾಲೂಕಿನ ಗ್ರಾಮೀಣ ಭಾಗದಿಂದ ನೆರೆಯ ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಗಾರ್ಮೆಂಟ್ಸ್‌ಗಳಿಗೆ ಕಾರ್ಮಿಕರು ತೆರಳುತ್ತಾರೆ. ಇದರಲ್ಲಿ ಮಹಿಳಾ ಕಾರ್ಮಿಕರೇ ಹೆಚ್ಚು. ನಗರ ಮತ್ತು ಹಳ್ಳಿಗಳಿಂದ ಕಾರ್ಮಿಕರನ್ನು ಕರೆದೊಯ್ದು, ಸಂಜೆ ವಾಪಸ್ ಅವರ ಊರುಗಳಿಗೆ ಬಿಡಲಾಗುತ್ತದೆ. ಕಾರ್ಮಿಕರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಕಾರ್ಖಾನೆಯವರ ಜವಾಬ್ದಾರಿಯಾಗಿದೆ. ಆದರೆ, ಬಹುತೇಕ ಕಾರ್ಖಾನೆ ಆಡಳಿತ ಮಂಡಳಿ ಯೋಗ್ಯವಲ್ಲದ ವಾಹನಗಳನ್ನು ಕಾರ್ಮಿಕರನ್ನು ಕರೆತರಲು ಬಳಸುತ್ತಿವೆ. ಸಂಚಾರ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಕಾರ್ಮಿಕರು ಅಲವತ್ತುಕೊಳ್ಳುತ್ತಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ
ಕಾರ್ಮಿಕರನ್ನು ಕರೆದೊಯ್ಯುವ ವಾಹನಗಳು ಚಾಲನೆಗೆ ಸುಸ್ಥಿತಿಯಲ್ಲಿರಬೇಕು. ಕಡ್ಡಾಯವಾಗಿ ವಿಮೆ ಹೊಂದಿರಬೇಕು. ಆಗ ಮಾತ್ರ ಅಪಘಾತ ಸಂದರ್ಭದಲ್ಲಿ ಕಾರ್ಮಿಕರಿಗೆ ವಿಮೆ ಸೌಲಭ್ಯ ದೊರೆಯಲಿವೆ. ಆದರೆ, ಅನೇಕ ವಾಹನಗಳಿಗೆ ವಿಮೆ ನವೀಕರಣ ಮಾಡಿಸುತ್ತಿಲ್ಲ. ಕಡಿಮೆ ವೇತನಕ್ಕೆ ಸಿಗುತ್ತಾರೆ ಎಂಬ ಕಾರಣಕ್ಕೆ ಸಾರಿಗೆ ನಿಯಮ ಗಾಳಿಗೆ ತೂರಿ ಅನುಭವ ಇಲ್ಲದ, ಚಾಲನಾ ತರಬೇತಿ ಹೊಂದಿಲ್ಲದ ಚಾಲಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಕೆಲವರು ಮದ್ಯಸೇವಿಸಿ, ಮೊಬೈಲ್‌ನಲ್ಲಿ ಮಾತನಾಡುತ್ತಾ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುತ್ತಾರೆ. ಅಲ್ಲದೆ, ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳನ್ನು ವ್ಯವಸ್ಥೆ ಮಾಡದ ಕಾರಣ ವಾಹನಗಳು ತುಂಬಿ ತುಳುಕುತ್ತಿರುತ್ತವೆ. ಅನೇಕರು ನಿಂತುಕೊಂಡೇ ಪ್ರಯಾಣಿಸಬೇಕು ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಪೊಲೀಸ್ ಹಾಗೂ ಸಾರಿಗೆ ಇಲಾಖೆಗಳು ಗಮನಹರಿಸಿ ಕ್ರಮ ಜರುಗಿಸಬೇಕು. ಆದರೆ, ಈ ವಿಚಾರದಲ್ಲಿ ಎರಡೂ ಇಲಾಖೆಗಳು ಮೌನಕ್ಕೆ ಶರಣಾಗಿವೆ.
ಕಾರ್ಮಿಕರ ಹಿತದೃಷ್ಟಿಯಿಂದ ಸುಸ್ಥಿತಿಯಲ್ಲಿರುವ ವಾಹನಗಳ ವ್ಯವಸ್ಥೆ ಮಾಡಬೇಕು. ಕಾಲಕಾಲಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ತಪಾಸಣೆ ನಡೆಸಬೇಕು. ಸಂಚಾರ ನಿಯಮ ಪಾಲಿಸದ ಕಾರ್ಖಾನೆಗಳು ಹಾಗೂ ಚಾಲಕರ ವಿರುದ್ಧ ಕ್ರಮ ಜರುಗಿಸಬೇಕು. - ಹೆಸರು ಹೇಳಲಿಚ್ಛಿಸದ ಕಾರ್ಖಾನೆಯೊಂದರ ಕಾರ್ಮಿಕರು