ವೇಮಗಲ್: ಹೆಚ್ಚು ಕಾರ್ಮಿಕರೇ ವಾಸವಿರುವ ಪ್ರದೇಶವಾದ ವೇಮಗಲ್ನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರ್ಕಾರವು ಸಮುದಾಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದು, ಅಗತ್ಯ ಸಲಕರಣೆ, ವೈದ್ಯರ ನೇಮಕ ಮಾಡದಿರುವುದರಿಂದ ಸಮಪರ್ಕವಾಗಿ ಆರೋಗ್ಯ ಸೇವೆ ದೊರೆಯಂತಾಗಿದೆ.
ಕೋಲಾರ ತಾಲೂಕಿನ ವೇಮಗಲ್&ಕುರಗಲ್ ಗ್ರಾಪಂಗಳನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ ಭಾಗದಲ್ಲಿ ಕೈಗಾರಿಕೆಗಳು ಹೆಚ್ಚಾಗಿದ್ದು, ಕಾರ್ಮಿಕರಿಗೆ ಆರೋಗ್ಯ ಸಮಸ್ಯೆಯಾದರೆ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಬೇಕು. ಆದರೆ, ಆಸ್ಪತ್ರೆಗಳಲ್ಲಿ ಮೂಲ ಸೌಲಭ್ಯ ಇಲ್ಲದಿರುವುದು ಸಮಸ್ಯೆಯಾಗಿದೆ.
ವೇಮಗಲ್ ಭಾಗದಲ್ಲಿ ಜನಸಂಖ್ಯೆಯು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು (ಪಿಎಚ್ಸಿ) ಸಮುದಾಯ ಆರೋಗ್ಯ ಕೇಂದ್ರವನ್ನಾಗಿ (ಸಿಎಸ್ಸಿ) ಮೇಲ್ದರ್ಜೆಗೇರಿಸಿದೆ. ಕೇಂದ್ರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಸೇರಿ ಇಲಾಖೆಯ ಮೇಲಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಭೇಟಿ ವೇಳೆ ವೈದ್ಯಕಿಯ ಸಲಕರಣೆ, ವೈದ್ಯರು, ಶುಶ್ರೂಷಕಿಯರು ಹಾಗೂ ಇತರ ಸಿಬ್ಬಂದಿ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ,ಸಾಕಷ್ಟು ಭರವಸೆ ಈಡೇರಿಲ್ಲ.
100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ವ್ಯಾಪ್ತಿಗೆ 100ಕ್ಕೂ ಹೆಚ್ಚು ಗ್ರಾಮಗಳು ಒಳಪಟ್ಟಿದ್ದು, ಅನಾರೋಗ್ಯಕ್ಕೆ ತುತ್ತಾದವರು ಚಿಕಿತ್ಸೆಗಾಗಿ ಇಲ್ಲಿಗೆ ಬರುವುದು ಅನಿವಾರ್ಯ. ಆದರೆ, ಚಿಕಿತ್ಸೆ ಸಿಗದೆ ಕೋಲಾರ, ಬೆಂಗಳೂರಿಗೆ ಹೋಗಲೂ ಆಗದೆ ಪರದಾಡುವಂತಾಗಿದೆ.
ಮತ್ತೊಂದು ಆಂಬುಲೆನ್ಸ್ಗೆ ಬೇಡಿಕೆ
ವೇಮಗಲ್ ಸಮುದಾಯ ಆರೋಗ್ಯ ಕೇಂದ್ರ 24/7 ಕಾರ್ಯನಿರ್ವಹಿಸಬೇಕು ಎಂಬ ನಿಯಮವಿದ್ದರೂ ಕಾಯಂ ವೈದ್ಯರು, ಶುಶ್ರ್ರೂಷಕಿಯರು ಇಲ್ಲದ ಕಾರಣ ಸೇವೆ ದೊರೆಯುವುದು ಅಷ್ಟಕಷ್ಟೆ ಆಗಿದೆ. ಚಿಕಿತ್ಸೆಗಾಗಿ ರಾತ್ರಿ ಆಸ್ಪತ್ರೆಗೆ ಬಂದವರಿಗೆ ವೈದ್ಯರು, ಸಿಬ್ಬಂದಿ ಲಭ್ಯ ಇಲ್ಲದೆ ಕೋಲಾರ, ಹೊಸಕೋಟೆ ಅಥವಾ ಬೆಂಗಳೂರಿಗೆ ಹೋಗಬೇಕಾಗುತ್ತದೆ. ಇರುವ ಆಂಬುಲೆನ್ಸ್ ರೋಗಿಯನ್ನು ಕರೆದುಕೊಂಡು ಹೋಗಿದ್ದರೆ, ಮತ್ತೆ ತುರ್ತು ಇದ್ದರೂ ಸೇವೆ ಸಿಗುವುದಿಲ್ಲ. ಆದ್ದರಿಂದ ಮತ್ತೊಂದು ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಯಿದೆ.
ಈಡೇರದ ಸಚಿವರ ಭರವಸೆ...!
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು 2023ರ ಜು.26 ರಂದು ಭೇಟಿ ನೀಡಿದಾಗ ಸ್ಥಳಿಯ ಕೆಲ ಸಂಸಂಸ್ಥೆಗಳ ಮುಖಂಡರು ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು ಗಮನಕ್ಕೆ ತಂದು ಕೂಡಲೇ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದರು. ಮನವಿಗೆ ಸ್ಪಂದಿಸಿದ ಸಚಿವರು ಅದಷ್ಟು ಬೇಗ ವೈದ್ಯರನ್ನು, ಸಲಕರಣೆಗಳನ್ನು ಕಲ್ಪಿಸುವ ಭರವಸೆ ನೀಡಿದ್ದು, ಇದುವರೆಗೂ ಈಡೇರಿಲ್ಲ.
ಎಕ್ಸ್ ರೇ, ಸ್ಕ್ಯಾನಿಂಗ್ ಸೆಂಟರ್ ತೆರೆಗೆ ಒತ್ತಾಯ
ಆಸ್ಪತ್ರೆಯಲ್ಲಿರುವ ರಕ್ತ ಪರೀಕ್ಷಾ ಕೇಂದ್ರದಲ್ಲಿ ವೈದ್ಯರು ಶಿಾರಸು ಮಾಡುವ ಪರೀೆಗಳು ಲಭ್ಯವಾಗುವುದಿಲ್ಲ. ಬಡವರ ಹಿತ ದೃಷ್ಟಿಯಿಂದ ಲ್ಯಾಬ್ ಟೆಕ್ನಿಷಿಯನ್ ನಿಯೋಜನೆ ಮಾಡಬೇಕು. ಜತೆಗೆ ಎಕ್ಸ್ ರೇ, ಸ್ಕ್ಯಾನಿಂಗ್ ಸೆಂಟರ್ ತೆರೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹಳೇ ಕಟ್ಟಡದಲ್ಲೇ ಕಾರ್ಯ
ಸಮುದಾಯ ಆರೋಗ್ಯ ಕೇಂದ್ರಕ್ಕಾಗಿ ಹೊಸ ಕಟ್ಟಡ ನಿರ್ಮಾಣ ಮಾಡಿದ್ದು, ಮಾನವ ಸಂಪನ್ಮೂಲ ಮತ್ತು ಸಲಕರಣೆಗಳ ಕೊರತೆಯಿಂದ ಹಳೇ ಕಟ್ಟಡದಲ್ಲೇ ಕಾರ್ಯನಿರ್ವಹಿಸಲಾಗುತ್ತಿದೆ.
ವೇಮಗಲ್ ಪಟ್ಟಣ ಪಂಚಾಯಿತಿ ಕೇಂದ್ರವಾಗಿದ್ದು, ಅಭಿವೃದ್ಧಿಯತ್ತ ಸಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಜನ ಸಂಖ್ಯೆಯು ಹೆಚ್ಚಾಗುತ್ತಿದೆ. ಸರ್ಕಾರವು ಆದ್ಯತೆ ಮೇರೆಗೆ ಸಮುದಾಯ ಆರೋಗ್ಯ ಕೇಂದ್ರ ಮಂಜೂರು ಮಾಡಿದ್ದು, ಅಗತ್ಯ ಸವಲತ್ತುಗಳನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಆರೋಗ್ಯ ಜನರಿಗೆ ದೊರೆಯುವಂತೆ ಮಾಡಬೇಕು. -ನಾಗೇಶ್ ಎಸ್ಎಫ್ಸಿಎಸ್ ಅಧ್ಯಕ್ಷ, ವೇಮಗಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಾಗಿ ಬೇಕಾಗಿರುವ ಸಿಬ್ಬಂದಿ, ಉಪಕರಣಗಳ ಮಾಹಿತಿ ನೀಡಲಾಗಿದ್ದು, ಇಲಾಖೆಯ ಅಧಿಕಾರಿಗಳು ಕ್ರಮಕೈಗೊಂಡು ಹಂತಹಂತವಾಗಿ ಸೌಲಭ್ಯ ಕಲ್ಪಿಸುತ್ತಿದ್ದಾರೆ. - ಡಾ.ರವಿಕಿರಣ್ ವೈದ್ಯಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ, ವೇಮಗಲ್ ಈ ಭಾಗದಲ್ಲಿ ಹೆಚ್ಚಾಗಿ ಕಾರ್ಮಿಕರೇ ವಾಸವಿದ್ದು, ಆರೋಗ್ಯ ಸಮಸ್ಯೆಯಾದರೆ ಮೊದಲು ಬರುವುದು ಸರ್ಕಾರಿ ಆಸ್ಪತ್ರೆಗೆ, ಇಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯಿಂದ ಸಕಾಲಕ್ಕೆ ಸೇವೆ ದೊರೆಯುತ್ತಿಲ್ಲ. ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಿ ಸೇವೆ ಕಲ್ಪಿಸಲು ಇಲಾಖಾಧಿಕಾರಿಗಳು ಮುಂದಾಗಬೇಕು. - ಜಿ.ಎನ್.ಧನರಾಜ್ ಕುಮಾರ್ ವಿಶಾಲ ವಾಣಿಜ್ಯ ವಿದ್ಯಾಶಾಲೆಯ ಪ್ರಾಂಶುಪಾಲ, ವೇಮಗಲ್ ವೇಮಗಲ್ ಪಟ್ಟಣವು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿ ಬೆಳೆಯುತ್ತಿದೆ. ಆದರೆ ಆರೋಗ್ಯ ಸೇವೆಯಲ್ಲಿ ನೀಡುವಲ್ಲಿ ಹಿಂದೆ ಬಿದ್ದಿದೆ. ಈ ಭಾಗದಲ್ಲಿ ಕೂಲಿ ಕಾರ್ಮಿಕರು ಹೆಚ್ಚಿರುವುದರಿಂದ ಆರೋಗ್ಯ ಸಮಸ್ಯೆ ಎದುರಾದರೆ ಸರ್ಕಾರಿ ಆಸ್ಪತ್ರೆಗೆ ಆಗಮಿಸುತ್ತಾರೆ. ಅಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯಿರುವುದರಿಂದ ಲಭ್ಯ ಸಿಬ್ಬಂದಿಗೆ ಒತ್ತಡ ಹೆಚ್ಚಾಗುತ್ತಿದೆ. ಮತ್ತಷ್ಟು ಮಾನವ ಸಂಪನ್ಮೂಲ ಕಲ್ಪಿಸಬೇಕು. - ಶಶಿಕಲಾ ನಾಗೇಶ್ ವೇಮಗಲ್ ಗ್ರಾಪಂ ಮಾಜಿ ಅಧ್ಯಕ್ಷೆ