ಜಿಲ್ಲೆ

ಜನರಿಗೆ ಸೌಲಭ್ಯ ಕಲ್ಪಿಸಲು ಶ್ರಮಿಸಿ

ಮಾನ್ವಿ: ರಾಜ್ಯ ಸರ್ಕಾರ ಸೇವಾ ಜ್ಯೇಷ್ಠತೆ ಅಧಾರದಲ್ಲಿ ಪೌರ ನೌಕರರನ್ನು ಕಾಯಂಗೊಳಿಸಿದ್ದು, ಉಳಿದ ನೌಕರರ ಕಾಯಂಗೆ ಕ್ರಮ ಕೈಗೊಳ್ಳುವ ಮೂಲಕ ಸೇವಾಭದ್ರತೆ ಒದಗಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ತಾಲೂಕು ಘಟಕ ವತಿಯಿಂದ ನಡೆದ ಪೌರ ಕಾರ್ಮಿಕರ ದಿನದ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ಸರ್ಕಾರ ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಅವರ ಕುಂದು-ಕೊರತೆಗಳನ್ನು ನಿವಾರಿಸುವುದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದರು.

ಪಟ್ಟಣದಲ್ಲಿ ಅಗತ್ಯವಾದ ರಸ್ತೆ, ಚರಂಡಿ ಹಾಗೂ ಇತರ ಮೂಲಸೌಲಭ್ಯ ಕಲ್ಪಿಸುವುದಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಪುರಸಭೆಗೆ ಅನುದಾನ ನೀಡಲಾಗುತ್ತಿದೆ. ಪುರಸಭೆ ಸದಸ್ಯರು ಮತ್ತು ಪೌರಕಾರ್ಮಿಕರು ಜನರಿಗೆ ಕುಡಿಯುವ ನೀರು, ಚರಂಡಿ, ಸ್ವಚ್ಛತೆ ಸೇರಿದಂತೆ ಇತರ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಶ್ರಮಿಸಬೇಕು ಎಂದು ಬೋಸರಾಜು ತಿಳಿಸಿದರು.

ಶಾಸಕ ಹಂಪಯ್ಯನಾಯಕ ಪೌರಕಾರ್ಮಿಕರನ್ನು ಸನ್ಮಾನಿಸಿದರು. ಪೌರಕಾರ್ಮಿಕರಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪೌರಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪೌರಕಾರ್ಮಿಕರಿಗೆ ಸಮವಸ್ತ್ರಗಳನ್ನು ನೀಡಲಾಯಿತು.

ಪುರಸಭೆ ಅಧ್ಯಕ್ಷೆ ಲಕ್ಷ್ಮೀ ವೀರೇಶಪ್ಪ, ಕುರುಬರ ಸಂಘದ ರಾಜ್ಯ ಅಧ್ಯಕ್ಷ ಎಂ.ಈರಣ್ಣ, ಪ್ರಮುಖರಾದ ಕೆ.ಶಾಂತಪ್ಪ, ಬಿ.ಕೆ.ಅಮರೇಶಪ್ಪ, ಅಬ್ದುಲ್ ಗಫೂರ್ ಸಾಬ್, ರಾಮಕೃಷ್ಣ, ಪುರಸಭೆ ಸದಸ್ಯರಾದ ಲಕ್ಷ್ಮೀದೇವಿ ನಾಯಕ, ಹುಸೇನ್ ಬಾಷಾ, ಬಸವರಾಜ ಭಜಂತ್ರಿ, ಸುಖಮುನಿ, ಶರಣಬಸವರಾಜ, ಶೇಖ್ ಫರೀದ್ ಉಮ್ರಿ, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಹಂಪಯ್ಯ, ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಇನ್ನಿತರರು ಇದ್ದರು.