ಚಳ್ಳಕೆರೆ: ನಗರದ ಬಳ್ಳಾರಿ ರಸ್ತೆಯಲ್ಲಿನ ಕಸ ವಿಲೇವಾರಿ ಘಟಕದಲ್ಲಿ ಕಸ ವಿಂಗಡಣೆಯಲ್ಲಿ ತೊಡಗಿಕೊಂಡಿರುವ ಅಸ್ಸಾಂ ಮೂಲದ ಕುಟುಂಬಗಳನ್ನು ಕೂಡಲೇ ಅವರ ರಾಜ್ಯಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಪೌರಾಯುಕ್ತ ಸಿ.ಚಂದ್ರಪ್ಪ ಹೇಳಿದರು.
ವಿಜಯವಾಣಿ ಪತ್ರಿಕೆಯಲ್ಲಿ ಕಸ ಬೇರ್ಪಡಿಸುವವರ ಬದುಕು ಮೂರಾಬಟ್ಟೆ ಶೀರ್ಷಿಕೆಯಡಿ ವರದಿಗೆ ಸ್ಪಂದಿಸಿ, ಕಸ ವಿಲೇವಾರಿ ಘಟಕಕ್ಕೆ ಬುಧವಾರ ಭೇಟಿ ನೀಡಿದ್ದ ವೇಳೆ ಮಾತನಾಡಿದರು.
ಕಸ ವಿಲೇವಾರಿ ಘಟಕದಲ್ಲಿ ಮರು ಬಳಕೆ ವಸ್ತುಗಳನ್ನು ಆಯ್ದುಕೊಳ್ಳುವ ಸಲುವಾಗಿ ಅಸ್ಸಾಂ ಮೂಲದ ಕುಟುಂಬಗಳು ಇಲ್ಲಿ ವಾಸವಾಗಿವೆ. ನಗರಸಭೆ ವತಿಯಿಂದ ಯಾವುದೇ ಸಂಬಳ ಮತ್ತು ಸೌಲಭ್ಯ ಕಲ್ಪಿಸುತ್ತಿಲ್ಲ. ಇವರ ಬದುಕಿನ ಚಿತ್ರಣವನ್ನು ವಿಜಯವಾಣಿ ಪತ್ರಿಕೆಯಲ್ಲಿ ಓದಿದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ್ದೇನೆ ಎಂದರು.
ಮಾನವೀಯ ದೃಷ್ಟಿಯಿಂದ ಪೌರಕಾರ್ಮಿಕರಿಗೆ ನೀಡಲಾಗುತ್ತಿರುವ ಸುರಕ್ಷತಾ ಧಿರಿಸಾದ ಬೂಟು, ಮಾಸ್ಕ್, ಹ್ಯಾಂಡ್‌ಗ್ಲೌಸ್, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಮಕ್ಕಳನ್ನು ಕೆಲಸದಲ್ಲಿ ತೊಡಗಿಸದಂತೆ ಕುಟುಂಬಸ್ಥರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದ ಹೇಳಿದರು.
ನಗರದಲ್ಲಿ ದಿನಕ್ಕೆ 20 ಟನ್ ಕಸ ಸಂಗ್ರಹವಾಗುತ್ತದೆ. ಇದನ್ನು ಹೊರವಲಯದ ಘಟಕದಲ್ಲಿ ಸಂಗ್ರಹಿಸಲಾಗುತ್ತಿದೆ. ಕಸದಲ್ಲಿನ ಮರು ಬಳಕೆ ವಸ್ತುಗಳನ್ನು ವಿಂಗಡಿಸುವ ಮತ್ತು ಹಸಿ-ಒಣ ಕಸ ಬೇರ್ಪಡಿಸುವ ಸಲುವಾಗಿ 52.17 ಲಕ್ಷ ರೂ. ವೆಚ್ಚದ ಸ್ಟೀನಿಂಗ್ ಮಷಿನ್ ಮತ್ತು 2.20 ಸಾವಿರ ರೂ. ವೆಚ್ಚದ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಯಂತ್ರೋಪಕರಣಗಳು ಕಾರ್ಯಾರಂಭ ಮಾಡಿದ ಕೂಡಲೇ ಅಸ್ಸಾಂ ಮೂಲದ ಕುಟುಂಬಗಳನ್ನು ಅವರ ರಾಜ್ಯಕ್ಕೆ ಮರಳಿ ಕಳುಹಿಸಲಾಗುವುದು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ಕೃಷಿ ಅಭಿವೃದ್ಧಿ ಯೋಜನಾಧಿಕಾರಿ ರಾಮಾಂಜಿನೇಯ ಮಾತನಾಡಿ, ಮಕ್ಕಳ ಆರೋಗ್ಯ ದೃಷ್ಟಿಯಿಂದ ಇಲಾಖೆ ವತಿಯಿಂದ ಅಕ್ಕಿ, ಬೇಳೆ, ಹಾಲಿನ ಪುಡಿ, ಅಕ್ಕಿ ನುಚ್ಚು, ಹೆಸರು ಕಾಳು, ಬೆಲ್ಲ ಇತರ ಆಹಾರ ಕಿಟ್‌ಗಳನ್ನು ವಿತರಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರಸಭಾ ಆರೋಗ್ಯ ನಿರೀಕ್ಷಕರಾದ ಮಹಾಲಿಂಗಪ್ಪ, ದಾದಾಪೀರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ಬಿ.ನರೇಂದ್ರಬಾಬು ಮತ್ತಿತರರು ಇದ್ದರು.