ಕೆರೂರ: ಪಟ್ಟಣದ ಹುಲಮನಿ ಕೈಗಾರಿಕೆ ಪ್ರದೇಶದ ಹಿಂಭಾಗದಲ್ಲಿರುವ ರುದ್ರಭೂಮಿಗೆ ಬಾದಾಮಿ ತಹಸೀಲ್ದಾರ್- ಕೆರೂರ ಪಪಂ ಆಡಳಿತಾಧಿ ಜೆ.ಬಿ.ಮಜ್ಜಗಿ ಗುರುವಾರ ಭೇಟಿ ನೀಡಿ ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ಪಟ್ಟಣದ ಬಹುಜನರು ಬಳಸುವ ಸ್ಮಶಾನಕ್ಕೆ ಹೋಗುವ ಮಾರ್ಗ ಸೇರಿದಂತೆ ಸ್ಮಶಾನದ ಆವರಣದಲ್ಲಿ ರಾತ್ರಿಯ ವೇಳೆ ಸಾರ್ವಜನಿಕರಿಗೆ ಶವ ಸಂಸ್ಕಾರಕ್ಕೆ ತೊಂದರೆಯಾಗದಂತೆ ವಿದ್ಯುತ್ ದೀಪಗಳನ್ನು ಅಳವಡಿಸಿ ಸರಿಯಾಗಿ ಮೇಲ್ವಿಚಾರಣೆ ಮಾಡುವಂತೆ ಪಪಂ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.
ಆವರಣದಲ್ಲಿನ ಕಲ್ಲು-ಕಂಟಿಗಳನ್ನು ಸ್ವಚ್ಛಗೊಳಿಸಬೇಕು. ಅಂದಾಜು 4 ಎಕರೆಯಷ್ಟಿರುವ ರುದ್ರಭೂಮಿ ಪ್ರದೇಶದ ಒಂದು ಮೂಲೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಜನರ ವಿಶ್ರಾಂತಿಗೆ ಅನುಕೂಲವಾಗುವಂತೆ ಉದ್ಯಾನ ನಿರ್ಮಿಸಬೇಕು. ಕುಡಿಯುವ ನೀರಿನ ಪೂರೈಕೆ, ಸ್ಮಶಾನದ ಗೇಟ್ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಅಗತ್ಯ ಮೂಲಸೌಕರ್ಯಗಳಿಗಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಕ್ರಿಯಾಯೋಜನೆ ತಯಾರಿಸಬೇಕು ಎಂದು ಸಲಹೆ ನೀಡಿದರು.
ಉಪತಹಸೀಲ್ದಾರ್ ರಾಜಶೇಖರ ಸಾತಿಹಾಳ, ಪಪಂ ಮುಖ್ಯಾಧಿಕಾರಿ ಕೃಷ್ಣ ಕಟ್ಟಿಮನಿ, ರಾಮಚಂದ್ರ ಅಂಕದ, ಮಹಾಂತೇಶ ಅಂಬಿಗೇರ, ಎಸ್.ವಿ.ಉದಗಟ್ಟಿ ಹಾಗೂ ಪಪಂ, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.