ಹನೂರಿನಲ್ಲಿ ಆಯೋಜಿಸಿದ್ದ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಸಮಸ್ಯೆ ಆಲಿಸಿದರು. ಗುರುಲಿಂಗಯ್ಯ, ರಂಗಸ್ವಾಮಿ, ಗುರುಸ್ವಾಮಿ, ವೆಂಕಟೇಶ್ ಇತರರು ಇದ್ದರು. 
ಜಿಲ್ಲೆ

ಆದ್ಯತೆ ಮೇರೆಗೆ ಶಾಲೆಗಳಿಗೆ ಸೌಕರ್ಯ

ಹನೂರು: ಮುಖ್ಯಶಿಕ್ಷಕರು ಯೋಜನೆ ರೂಪಿಸಿ ವರದಿ ಸಲ್ಲಿಸಿದರೆ ಕೊರತೆ ಇರುವ ಶಾಲೆಗಳಿಗೆ ಆದ್ಯತೆ ಮೇರೆಗೆ ಮೂಲಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ಎಂ.ಆರ್.ಮಂಜುನಾಥ್ ಭರವಸೆ ನೀಡಿದರು.

ಪಟ್ಟಣದ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಪ್ರಗತಿ ಪರಿಶೀಲನೆ ಸಂಬಂಧ ಆಯೋಜಿಸಿದ್ದ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಭೆಯಲ್ಲಿ ಮಾತನಾಡಿದರು.

ಹನೂರು ಶೈಕ್ಷಣಿಕ ವಲಯ ಕಳೆದ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಕಳಪೆ ಫಲಿತಾಂಶ ಗಳಿಸಿದ ಹಿನ್ನೆಲೆಯಲ್ಲಿ ಈಗಾಗಲೇ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಿ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಇದಕ್ಕೆ ಪೂರಕವಾಗಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಜ್ಞಾನ ವೃದ್ಧಿಸುವ ಜತೆಗೆ ಕಲಿಕಾ ಮಟ್ಟ ಹೆಚ್ಚಾಗಬೇಕು. ಕೌಶಲ, ಸೃಜನಶೀಲತೆ, ಭಾಷ ಸಂಪತ್ತು ಪ್ರೌಢಿಮೆಯಾಗಬೇಕು. ಇದರಿಂದ ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಶಾಲೆಯ ಅಭಿವೃದ್ಧಿಯ ಜತೆಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು ಎಂದು ತಿಳಿಸಿದರು.

ಶಾಸಕರಿಂದ ಅಗತ್ಯ ಭರವಸೆ:

ಬಳಿಕ ಶಾಲೆಯ ಸುತ್ತುಗೋಡೆ ನಿರ್ಮಾಣ, ಕೊಠಡಿ, ಶೌಚಗೃಹ, ರಸ್ತೆ, ಬಸ್ ಸೌಕರ್ಯ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಶಿಕ್ಷಕರು ಮನವಿ ಮಾಡಿದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಮ.ಬೆಟ್ಟದ ತಪ್ಪಲಿನ ಕಾಡಂಚಿನ ಗ್ರಾಮಗಳಿಗೆ 20 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲು ಈಗಾಗಲೇ ಕ್ರಮ ವಹಿಸಲಾಗಿದೆ. ಶಾಲೆಯ ಅವಧಿಗೆ ಅನುಗುಣವಾಗಿ ಬಸ್ ಸೌಕರ್ಯ ಒದಗಿಸಲಾಗುವುದು. ಜತೆಗೆ ಮಕ್ಕಳ ಶಿಕ್ಷಣಕ್ಕೆ ಕೊರತೆಯಾಗದಂತೆ ಮೂಲ ಸೌಕರ್ಯವನ್ನು ಕಲ್ಪಿಸಲಾಗುವುದು. ಒಟ್ಟಿನಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದರು.

ಇದೇ ವೇಳೆ ಪ್ರತಿ ಶಾಲೆಯ ಮುಖ್ಯ ಶಿಕ್ಷಕರಿಂದ ಮಕ್ಕಳ ದಾಖಲಾತಿ ಬಗ್ಗೆ ಮಾಹಿತಿ ಪಡೆದ ಶಾಸಕರು ಕಡಿಮೆ ದಾಖಲಾತಿ ಹೊಂದಿರುವ ಶಾಲೆಯ ಬಗ್ಗೆ ಅಗತ್ಯ ಕ್ರಮವಹಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಹೆಚ್ಚಿನ ಮಕ್ಕಳು ದಾಖಲಾಗುವಂತೆ ಮುತುರ್ವಜಿ ವಹಿಸಬೇಕು ಸೂಚಿಸಿದರು.

ಸಭೆಯಲ್ಲಿ ಬಿಇಒ ಗುರುಲಿಂಗಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಬಿಆರ್‌ಪಿ ವೆಂಕಟೇಶ್, ಶಿಕ್ಷಣ ಸಂಯೋಜಕರಾದ ಅಶೋಕ್, ಚಿನ್ನಪ್ಪಯ್ಯ, ಮಹೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಮಲ್ಲು ಇತರರು ಇದ್ದರು.