ಜಿಲ್ಲೆ

ದೊಡ್ಡಾಸ್ಪತ್ರೆಯಲ್ಲಿ ಸೌಲಭ್ಯದ್ದೇ ದೊಡ್ಡ ಸಮಸ್ಯೆ

ಆರ್.ಕೃಷ್ಣ

ಮೈಸೂರು: ಮೈಸೂರು ಅರಸರು ಕಟ್ಟಿಸಿರುವ ದೊಡ್ಡಾಸ್ಪತ್ರೆಯಾದ ಕೆ.ಆರ್.ಆಸ್ಪತ್ರೆ ಈಗ ಅವ್ಯವಸ್ಥೆಗಳ ಆಗರವಾಗಿದ್ದು, ರೋಗಿಗಳಗೆ ಸಂಕಟ ಹೇಳತೀರದಾಗಿದೆ.
ಸರ್ಕಾರ ಕೋಟ್ಯಂತ ರೂ.ವೆಚ್ಚದಲ್ಲಿ ಉಪಕರಣಗಳನ್ನು ನೀಡಿದರೂ ರೋಗಿಗಳನ್ನು ಸಾಗಿಲು ಒಂದು ವ್ಹೀಲ್ ಚೇರ್, ಸ್ಟ್ರೆಚ್ಚರ್ ಇಲ್ಲದೆ ಪರದಾಡುವಂತಾಗಿದೆ. ಇರುವ ವ್ಹೀಲ್ ಚೇರ್, ಸ್ಟ್ರೆಚ್ಚರ್‌ಗಳನ್ನು ಸಣ್ಣಪುಟ್ಟ ದುರಸ್ತಿಯನ್ನು ಮಾಡದೆ ಕೊಠಡಿಯೊಂದಕ್ಕೆ ಹಾಕಿ ಬೀಗ ಹಾಕಲಾಗಿದೆ.
ನಡೆಯಲು ಸಾಧ್ಯವಿಲ್ಲದ ವೃದ್ಧ ಮಹಿಳೆಯೊಬ್ಬರು ಆಸ್ಪತ್ರೆಗೆ ಬಂದಾಗ ವ್ಹೀಲ್ ಚೇರ್ ಇಲ್ಲದೆ ಸಾಮಾನ್ಯ ಪ್ಲಾಸ್ಟಿಕ್ ಕುರ್ಚಿಯಲ್ಲಿ ಕೂರಿಸಿ ಸಂಬಂಧಿಕರೇ ವಾರ್ಡ್‌ಗೆ ಕರೆದುಕೊಂಡು ಹೋದ ದೃಶ್ಯವನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಈ ಕುರಿತು ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಕೆ.ಆರ್.ಆಸ್ಪತ್ರೆಗೆ ಇಂತಹ ದುಸ್ಥಿತಿ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ, ಆಸ್ಪತ್ರೆಯ ಡೀನ್, ಅಧೀಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ವ್ಹೀಲ್ ಚೇರ್‌ಗಳು, ಸ್ಟ್ರೆಚ್ಚರ್‌ಗಳು ದುಸ್ಥಿತಿಯಲ್ಲಿವೆ. ಇವುಗಳನ್ನು ಸರಿ ಪಡಿಸುವಂತೆ ಹಾಗೂ ಹೊಸ ಉಪಕರಣಗಳನ್ನು ನೀಡುವಂತೆ ಕೋರಿ ಮೂರು ತಿಂಗಳ ಹಿಂದೆಯೇ ಪತ್ರ ಬರೆದಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಧೀಕ್ಷಕಿ ಡಾ.ಶೋಭಾ ಅವರು ದೂರಿದರು. ಈ ವೇಳೆ ಸರಿ ಪಡಿಸಲು ನನಗೆ ತಿಳಿಸಬೇಕಾಗಿತ್ತು. ನಿರ್ಲಕ್ಷೃವಹಿಸಲಾಗಿದೆ ಎಂದು ಸಾರ್ವಜನಿಕರವಾಗಿಯೇ ಶಾಸಕರು ತರಾಟೆಗೆ ತೆಗೆದುಕೊಂಡರು.
ಕೊಠಡಿಯಲ್ಲಿ ವ್ಹೀಲ್ ಚೇರ್:
ಶಾಸಕರು ಆಸ್ಪತ್ರೆಗೆ ಭೇಟಿ ನೀಡಿದಾಗ ವ್ಹೀಲ್ ಚೇರುಗಳಿದ್ದರೂ ಅವುಗಳಿಗೆ ಸರಪಳಿಯಿಂದ ಬೀಗ ಹಾಕಿರುವುದು, ಇನ್ನೂ ಹಲವು ಸಾಮಾಗ್ರಿಗಳಿರುವ ಕೊಠಡಿಯಲ್ಲಿರಿಸಿ ಬೀಗ ಹಾಕಿರುವುದನ್ನು ವೀಕ್ಷಿಸಿದರು.
ಈ ವೇಳೆ ರೋಗಿಗಳು ಆಸ್ಪತ್ರೆಗೆ ಬಂದಾಗ ಸಂಬಂಧಿಕರು ಹೊತ್ತೊಯ್ಯುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಆಸ್ಪತ್ರೆಯ ಆಡಳಿತಾಧಿಕಾರಿಗಳು ಮತ್ತು ವೈದ್ಯರು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ರೋಗಿಗಳು ಶಾಸಕರ ಬಳಿ ದೂರು ಹೇಳಿದರು.
ಇದೇ ವೇಳೆ ಆಸ್ಪತ್ರೆಯಲ್ಲಿ ಲಿಫ್ಟ್ೃ ಕೆಟ್ಟಿರುವುದು, ಸ್ಟ್ರೆಕ್ಚರ್, ವ್ಹೀಲ್ ಚೇರ್ ಸಾಮಾಗ್ರಿಗಳು ಇದ್ದ ಕೊಠಡಿಗೆ ಬೀಗ ಹಾಕಿರುವುದನ್ನು ವೀಕ್ಷಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಬೀಗ ತೆಗೆಯುವಂತೆ ಹೇಳಿದರೂ ಕೀ ಇಲ್ಲ ಎಂದು ಸಿಬ್ಬಂದಿ ಸಬೂಬು ಹೇಳಿದರು. ಆಗ ಶಾಸಕ, ಆಸ್ಪತ್ರೆಯ ಡೀನ್, ಅಧೀಕ್ಷಕರ ಸಮ್ಮುಖದಲ್ಲೇ ಕೊಠಡಿ ಬೀಗ ಒಡೆದು ತೆರೆಯಲಾಯಿತು. ಈ ಸಂದರ್ಭ ವಸ್ತುಗಳು ಹಾಳಾಗಿರುವ ಬಗ್ಗೆ ವೈದ್ಯಾಧಿಕಾರಿಗಳಲ್ಲೇ ಮಾತಿನ ಚಕಮಿಕಿ ನಡೆಯಿತು. ಇದರಿಂದ ಸಿಡಿಮಿಡಿಗೊಂಡ ಶಾಸಕರು, ಅಧೀಕ್ಷಕಿ ಶೋಭಾ ಅವರ ವಿರುದ್ಧ ಹರಿಹಾಯ್ದರು.
ಇದರಿಂದ ಶೋಭಾ ಕಣ್ಣೀರು ಹಾಕುತ್ತ ರಾಜೀನಾಮೆ ನೀಡುವುದಾಗಿ ಹೇಳಿದರು. ಇಷ್ಟಕ್ಕೆ ಸುಮ್ಮನಾಗದೆ ಆಸ್ಪತ್ರೆಯಲ್ಲಿ ಯಾರೊಬ್ಬರೂ ಹೇಳಿದ ಮಾತು ಕೇಳಲ್ಲ. ಒಂದು ವೇಳೆ ಅವರ ವಿರುದ್ಧ ಕ್ರಮಕ್ಕೆ ಮುಂದಾದರೆ ಹತ್ತಾರು ಜನ ಆರ್‌ಟಿಐ ಕಾರ್ಯಕರ್ತರು ಬಂದು ಪ್ರಶ್ನೆ ಮಾಡುತ್ತಾರೆ. ಇಲ್ಲಿನ ವ್ಯವಸ್ಥೆ ಹಾಳಾಗಿದೆ ಎಂದು ಶೋಭಾ ಅಸಾಯಕತೆ ವ್ಯಕ್ತಪಡಿಸಿದರು.
ಬಳಿಕ ಮೈಸೂರು ಮೆಡಿಕಲ್ ಕಾಲೇಜು ಮತ್ತು ಕೆ.ಆರ್. ಆಸ್ಪತ್ರೆ ಡೀನ್ ಡಾ. ದಾಕ್ಷಾಯಿಣಿ ಘಟನೆ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಜತೆಗೆ ಎಲ್ಲರಿಗೂ ನೋಟಿಸ್ ನೀಡಲಾಗುವುದು. ಕೆಟ್ಟು ನಿಂತಿರುವ ಲಿಫ್ಟ್ ಸೇರಿದಂತೆ ವ್ಹೀಲ್ ಚೇರ್, ಸ್ಟ್ರೆಚ್ಚರ್‌ಗಳನ್ನು ಮೂರು ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಹೇಳಿದರು.
ಆಸ್ಪತ್ರೆಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಿದ್ದರೂ ಅದನ್ನು ಸದ್ಬಳಕೆ ಮಾಡಿಕೊಳ್ಳದೆ ರೋಗಿಗಳಿಗೆ ತೊಂದರೆ ಉಂಟು ಮಾಡುತ್ತಿರುವುದು ಸಹಿಸಲಾಗುವುದಿಲ್ಲ. ಈಗ ತಪ್ಪು ಮಾಡಿರುವವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗುವುದು. ಜತೆಗೆ ಮುಂದೆ ಈ ರೀತಿ ಆಗದಂತೆ ಎಚ್ಚರಿಕೆಯಿಂದಿರಬೇಕು. ರೋಗಿಗಳಿಗೆ ಮೂಲ ಸೌಲಭ್ಯ ಹಾಗೂ ಗುಣಮಟ್ಟದ ಚಿಕಿತ್ಸೆ ಸಿಗಬೇಕು ಎಂದು ಶಾಸಕರು ಹೇಳಿದರು.