ಜಿಲ್ಲೆ

ಕಲಘಟಗಿಯ ವಡ್ಡರ ಓಣಿಗೆ ಸೌಕರ್ಯ ಕಲ್ಪಿಸಿ

ಕಲಘಟಗಿ: ಪಟ್ಟಣದ ವಡ್ಡರ ಓಣಿಯ ನಿವಾಸಿಗಳಿಗೆ ಸರ್ಕಾರ ಹಾಗೂ ಪಟ್ಟಣ ಪಂಚಾಯಿತಿಯಿಂದ ದೊರೆಯಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ನಿವಾಸಿಗಳು ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ಜಾತಿಯವರಾದ ನಾವು ಅನಾದಿ ಕಾಲದಿಂದಲೂ ಇಲ್ಲೇ ವಾಸಿಸುತ್ತಿದ್ದೇವೆ. 1984 ಹಾಗೂ 85ರಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿ ನಾವು ವಾಸವಾಗಿದ್ದ ಜಮೀನುಗಳನ್ನ ವಶಪಡಿಸಿಕೊಂಡು ಪುರಸಭೆಗೆ ಹಸ್ತಾಂತರಿಸಿ ಜಮೀನಿನ ಫಲಾನುಭವಿಗಳಿಗೆ ವಾಸದ ಮನೆ ಕಟ್ಟಿಕೊಟ್ಟು 1986ರಲ್ಲಿ ಹಕ್ಕು ಪತ್ರಗಳನ್ನೂ ವಿತರಿಸಿದ್ದರು. 35 ವರ್ಷ ಕಳೆದರೂ ಇಲ್ಲಿನ ನಿವಾಸಿಗಳಿಗೆ ಸರ್ಕಾರ ಹಾಗೂ ಪಟ್ಟಣ ಪಂಚಾಯಿತಿಯಿಂದ ಯಾವುದೇ ಸಹಾಯ ಸಿಗುತ್ತಿಲ್ಲ. ಆದ್ದರಿಂದ ಕೂಡಲೇ ನಮಗೆ ನ್ಯಾಯ ದೊರಕಿಸಿಕೊಟ್ಟು ಯೋಗ್ಯ ಪರಿಹಾರ ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಪರಶುರಾಮ ಬಂಡಿವಡ್ಡರ, ತಿಪ್ಪಣ್ಣ ವಡ್ಡರ, ನಾಗೇಶ ವಡ್ಡರ, ಪರಶುರಾಮ ವಡ್ಡರ, ಕೃಷ್ಣ ವಡ್ಡರ, ರಾಜು ದೊಡ್ಡಮನಿ, ಬಸವರಾಜ ಮಾಧರ, ನಾಗರಾಜ ವಡ್ಡರ, ದುರ್ಗಪ್ಪ ಬಂಡಿವಡ್ಡರ, ವೆಂಕಟೇಶ ಬಂಡಿವಡ್ಡರ, ಹನುಮಂತ ವಡ್ಡರ, ಮಂಗಲಾ ವಡ್ಡರ ಇದ್ದರು.

ದಶಕಗಳಿಂದ ನಮ್ಮ ಸಮಾಜದ ನಿವಾಸಿಗಳು ಶೋಷಣೆಗೆ ಒಳಗಾಗಿದ್ದಾರೆ. ವಡ್ಡರ ಓಣಿಯ ನಿವಾಸಿಗಳಿಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೂಡಲೇ ಸೌಕರ್ಯ ಒದಗಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿ ನ್ಯಾಯ ಒದಗಿಸಿಕೊಡಬೇಕು. - ನರೇಶ ಮಲೆನಾಡು, ಸಿದ್ದರಾಮೇಶ್ವರ ಭೋವಿ ವಡ್ಡರ ಸಂಘದ ತಾಲೂಕು ಅಧ್ಯಕ್ಷ