ಜಿಲ್ಲೆ

ಫೇಸ್​ಬುಕ್ ಸ್ನೇಹಿತರು ಹಣ ಕೇಳ್ತಾರೆ ಹುಷಾರ್ ; ಗೆಳೆಯರ ಹೆಸರಿನಲ್ಲಿ ನಕಲಿ ಖಾತೆ

Tumakuru

ತುಮಕೂರು : ಫೇಸ್​ಬುಕ್ನಲ್ಲಿ ಎಂದೂ ಹಣ ಕೇಳದ ಹೊಸ ಸ್ನೇಹಿತ ಹಣ ಕೇಳಿದ ಎಂದು ಅವರ ಗೂಗಲ್‌ಪೇ ನಂಬರ್‌ಗೆ ಹಣ ಹಾಕಿದರೆ ಹುಷಾರ್... ನೀವು ಮೋಸ ಹೋದ್ರೀ ಎಂದೇ ಅರ್ಥ.

ಹೌದು, ಸ್ನೇಹಿತನ ಕಷ್ಟಕ್ಕಾಗುವ ನಿಮ್ಮ ಸದ್ಗುಣ ವಂಚಕರ ಜಾಲಕ್ಕೆ ತುತ್ತಾಗುವ ಸಾಧ್ಯತೆಯಿದೆ. ಫೇಸ್​ಬುಕ್ ಮೂಲಕ ಗೆಳೆಯರನ್ನು ಸಾಲ ಕೇಳುವವರ ಸಂಖ್ಯೆ ಜಾಸ್ತಿಯಾಗಿದ್ದು, ಕಷ್ಟದಲ್ಲಿದ್ದಾನೆ ಎಂದು ಫೋನ್ ಫೇ, ಗೂಗಲ್ ಪೇ ಮೂಲಕ ಹಣ ಹಾಕಿ ಲಕ್ಷಾಂತರ ರೂ. ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಪೊಲೀಸರಿಗೂ ತಲೆ ನೋವು ತಂದಿದೆ.

ರಾಜ್ಯದೆಲ್ಲೆಡೆ ಸೈಬರ್ ಕ್ರೈಂಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಫೇಸ್​ಬುಕ್, ವಿಡಿಯೋ ಕಾಲ್ ಮೂಲಕ ಹಣ ಪೀಕುವ ಪ್ರವೃತ್ತಿ ವ್ಯಾಪಕವಾಗಿದೆ. ವಂಚನೆಗೊಳಗಾದವರ ನಿಖರ ಸಂಖ್ಯೆ ತಿಳಿಯದಿದ್ದರೂ ಅಂದಾಜಿನ ಪ್ರಕಾರ ತುಮಕೂರು ಜಿಲ್ಲೆಯೊಂದರಲ್ಲಿಯೇ 15 ಸಾವಿರಕ್ಕೂ ಹೆಚ್ಚು ಜನರು ಮೋಸದ ಜಾಲಕ್ಕೆ ಹಣ ಕಳೆದುಕೊಂಡಿದ್ದಾರೆ.

ಪ್ರೊಫೈಲ್ ಫೋಟೋ ಬಳಸಿಕೊಂಡು  ಫೇಸ್​ಬುಕ್ ‌ನಲ್ಲಿ ನಕಲಿ ಖಾತೆ ಸೃಷ್ಟಿಸುವ ಸೈಬರ್ ಖದೀಮರು, ಗೆಳೆಯರಿಗೆಲ್ಲಾ ರಿಕ್ವೆಸ್ಟ್ ಕಳುಹಿಸಿ ಮತ್ತೆ ಸ್ನೇಹಿತರಾಗಿ ಮೆಸೆಂಜರ್ ಮೂಲಕ ಹಣ ಕೇಳುವ ದಂಧೆ ಜಿಲ್ಲೆಯೆಲ್ಲೆಡೆ ವ್ಯಾಪಕವಾಗಿದೆ. ಕಳೆದೊಂದು ವಾರದಲ್ಲಿಯೇ ತುಮಕೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ಐದು ಪ್ರಕರಣ ದಾಖಲಾಗಿವೆ.

ಡಾ.ಅಭಿಜ್ಞ ಹೆಸರಿನಲ್ಲಿಯೂ ಫೇಕ್ ಅಕೌಂಟ್: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಪುತ್ರ ಡಾ.ಅಭಿಜ್ಞ ಹೆಸರಿನಲ್ಲಿ ಶನಿವಾರ ನಕಲಿ ಖಾತೆ ಸೃಷ್ಟಿಯಾಗಿದ್ದು, ಸ್ನೇಹಿತರ ಬಳಿ ಹಣ ಕೇಳಲಾಗಿರುವ ಬಗ್ಗೆ ಅವರು ಪೊಲೀಸರಿಗೆ ಕೂಡಲೇ ದೂರು ನೀಡಿ, ಈ ಕುರಿತು ಅವರ ಅಧಿಕೃತ ಖಾತೆಯಲ್ಲಿಯೂ ಬರೆದುಕೊಂಡು ಹಣ ನೀಡದಂತೆ ಎಚ್ಚರಿಸಿದ್ದಾರೆ.

ಹಣ ಕಳೆದುಕೊಂಡವರಿಂದ ದೂರು: ಈ ರೀತಿಯ ವಂಚನೆ ತಿಳಿಯದವರು ಸುಮ್ಮನಾಗುತ್ತಿದ್ದಾರೆ. ಪ್ರತಿನಿತ್ಯ ಸಾವಿರಾರು ನಕಲಿ ಖಾತೆಗಳ ಮೂಲಕ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ವಂಚಕರು ಕೆಲವರ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿಕೊಂಡು ಅಂತಹವರ ಖಾತೆಗೆ ಗೂಗಲ್ ಪೇ ಮೂಲಕ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದಾರೆ. ಹಣ ಕಳೆದುಕೊಂಡವರು ಮಾತ್ರ ದೂರು ನೀಡುತ್ತಿರುವುದು ಕಂಡುಬಂದಿದೆ.

ವಿಡಿಯೋ ಕಾಲ್ ರೆಕಾರ್ಡ್ ಮಾಡ್ತಾರೆ ಎಚ್ಚರ! : ಸ್ನೇಹಿತರ ಮೂಲಕ ಹಣ ಕೇಳುವ ದಂಧೆ ಒಂದು ಕಡೆಯಾದರೆ, ಅಪರಿಚಿತ ಸುಂದರಿಯರು ಕಳುಹಿಸುವ ಕೋರಿಕೆ ಒಪ್ಪಿ ಸ್ನೇಹಿತರಾದರೆ ಯುವಕರ ಕಥೆ ಮುಗಿದಂತೆಯೇ. ೇಸ್‌ಬುಕ್ ಮೂಲಕ ಸ್ನೇಹ ಬೆಳೆಸುವ ಸುಂದರಿ ಚಾಟಿಂಗ್‌ನಲ್ಲಿ ಸಲುಗೆಯಿಂದ ಮಾತನಾಡಿ ವಿಡಿಯೋ ಕಾಲ್ ಮೂಲಕ ತಾನೂ ಬೆತ್ತಲಾಗಿ, ಯುವಕನನ್ನು ಬೆತ್ತಲಾಗಿಸಿ ಕಾಲ್ ರೆಕಾರ್ಡ್ ಮಾಡಿಕೊಂಡು ನಂತರ 500ರೂ. ನಿಂದ ಲಕ್ಷಾಂತರ ರೂ. ಹಣ ಕೇಳುತ್ತಾರೆ. ಮರ್ಯಾದೆಗೆ ಅಂಜಿ ಬಹುತೇಕರು ದೂರು ನೀಡಲು ಹಿಂಜರಿಯುತ್ತಿದ್ದು, ದೂರುಗಳಿಲ್ಲದೆ ಈ ವಂಚಕರ ಜಾಲದ ಬಗ್ಗೆ ಖುದ್ದು ಸೈಬರ್ ಕ್ರೈಂ ಠಾಣೆಗೂ ನೂರಾರು ಜನರು ತಿಳಿಸುತ್ತಿದ್ದಾರೆ.

ಫೇಸ್​ಬುಕ್ ಮೂಲಕ ಪರಿಚಯವಾಗಿ ಸಲುಗೆಯಿಂದ ಮಾತನಾಡಿದಳು. ಮನಸ್ಸು ಕೆಡಿಸಿ ವಿಡಿಯೋ ಕಾಲ್‌ನಲ್ಲಿ ಬೆತ್ತಲಾದಳು, ನಾನೂ ಬೆತ್ತಲಾಗುವಂತೆ ಮಾಡಿ ತಿಳಿಯದಂತೆ ರೆಕಾರ್ಡ್ ಮಾಡಿಕೊಂಡರು. ನಂತರ ವಿಡಿಯೋ ತೋರಿಸಿ ಲಕ್ಷಾಂತರ ರೂ.ಪೀಕಿದಳು. ನೊಂದು ನನ್ನ ನಂಬರ್ ಬದಲಾಯಿಸಿದ ಮೇಲೆ ಶೋಷಣೆ ತಪ್ಪಿದೆ, ದೊಡ್ಡ ವಂಚಕರ ಜಾಲವೇ ಇದೆ. ವಂಚನೆಗೊಳಗಾದ ಯುವಕ, ತುಮಕೂರು ಫೇಸ್​ಬುಕ್ ಮೂಲಕ ವಂಚನೆ ಪ್ರಕರಣ ನಡೆಯುತ್ತಿವೆ. ಕಳೆದೊಂದು ವಾರದಲ್ಲಿ ಐವರು ದೂರು ನೀಡಿದ್ದಾರೆ. ಯುವತಿಯರು ವಿಡಿಯೋ ಕಾಲ್ ರೆಕಾರ್ಡ್ ಮೂಲಕ ಹಣ ಕೇಳುತ್ತಿರುವ ಬಗ್ಗೆ ಮೋಸಕ್ಕೊಳಗಾದವರು ದೂರು ನೀಡಲು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಶೇಷಾದ್ರಿ, ಸಿಪಿಐ, ಸೈಬರ್ ಕ್ರೈಂ ಪೊಲೀಸ್ ಠಾಣೆ