ಮದಘಟ್ಟ ಸಮೀಪದಲ್ಲಿರುವ ಡಾ.ಅಂಬೇಡ್ಕರ್ ವಸತಿ ಶಾಲೆಗೆ ತಹಸೀಲ್ದಾರ್ ಎಂ.ಮಮತಾ ಭೇಟಿ ನೀಡಿ ವಿದ್ಯರ್ಥಿಗಳೊಂದಿಗೆ ಚರ್ಚಿಸಿದರು. 
ಜಿಲ್ಲೆ

ಆತ್ಮವಿಶ್ವಾಸದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿ

ಅಭಿನಯ್ ಎಚ್.ಎಂ

ಬೇಲೂರು: ಪರೀಕ್ಷೆಯನ್ನು ಭೂತದಂತೆ ತಲೆಯಲ್ಲಿ ತುಂಬಿಕೊಳ್ಳದೆ ಭಯ, ಆತಂಕ, ಗೊಂದಲವನ್ನು ಮನಸ್ಸಿನಿಂದ ಹೊರಹಾಕಿ ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಬೇಕು ಎಂದು ತಹಸೀಲ್ದಾರ್ ಎಂ.ಮಮತಾ ಸಲಹೆ ನೀಡಿದರು.

ತಾಲೂಕಿನ ಮದಘಟ್ಟ ಸಮೀಪದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಅಂಬೇಡ್ಕರ್ ವಸತಿ ಶಾಲೆಗೆ ಮಂಗಳವಾರ ಸಂಜೆ ದಿಢೀರ್ ಭೇಟಿ ನೀಡಿ ಅಲ್ಲಿನ ಶುಚಿತ್ವ, ಕುಡಿಯುವ ನೀರು, ಅಡುಗೆ ಕೊಠಡಿ, ವಿದ್ಯಾರ್ಥಿಗಳು ಮಲಗುವ ಕೊಠಡಿ, ಸ್ನಾನಗೃಹ, ಶೌಚಗೃಹಗಳನ್ನು ಪರಿಶೀಲಿಸಿದ ಬಳಿಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.

ಸಾಮಾನ್ಯವಾಗಿ ಪರೀಕ್ಷೆ ಎಂದರೆ ಅದರಲ್ಲೂ ವಿಶೇಷವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಾಢ ಪರಿಣಾಮ ಬೀರುತ್ತದೆ. ಜತೆಗೆ ಚಳಿಜ್ವರ ಬಂದಂತೆ ವಿದ್ಯಾರ್ಥಿಗಳು ಭಯಗೊಳ್ಳುತ್ತಾರೆ. ಇದರಿಂದಾಗಿ ಅವರು ಎಷ್ಟೇ ಬುದ್ಧಿವಂತರಾಗಿದ್ದರೂ, ಎಷ್ಟೇ ಚೆನ್ನಾಗಿ ಓದಿ ಪರೀಕ್ಷೆಗೆ ಸಿದ್ಧಗೊಂಡಿದ್ದರೂ ಮಾನಸಿಕ ಖಿನ್ನತೆಗೊಳಗಾಗಿ ಕಲಿತದ್ದನ್ನು ಮರೆತು ಪರೀಕ್ಷೆಯಲ್ಲಿ ಬರೆಯುವಲ್ಲಿ ವಿಫಲರಾಗುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ವರ್ಷಪೂರ್ತಿ ಓದಿದ್ದು, ಕಲಿತದ್ದು ಸಾರ್ಥಕವಾಗಬೇಕಾದರೆ ಪರೀಕ್ಷೆಯ ಭಯವೆಂಬ ಭೂತವನ್ನು ಮನಸ್ಸಿನಿಂದ ಕಿತ್ತುಹಾಕಿ ಪರೀಕ್ಷೆಯನ್ನು ಪರೀಕ್ಷೆಯಾಗಿ ನೋಡದೆ ಇದೊಂದು ವಾರ್ಷಿಕ ಹಬ್ಬವೆಂದು ಭಾವಿಸಬೇಕು ಎಂದರು.

ಪ್ರತಿ ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಎಂಬುದು ಪ್ರಮುಖವಾದ ಘಟ್ಟ. ಇದನ್ನು ಯಶಸ್ವಿಯಾಗಿ ದಾಟಿ ಹೋದಲ್ಲಿ ಮುಂದಿನ ಓದಿಗೆ ಸುಲಭವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಾಸಾದರೆ ಸಾಲದು. ಭವಿಷ್ಯದ ದೃಷ್ಟಿಯಿಂದ ಹೆಚ್ಚು ಅಂಕಗಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹಾಗಾಗಿ ಪರೀಕ್ಷೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿ ಓದಿದರೆ ಉತ್ತಮ ಫಲಿತಾಂಶ ಬರಲಿದೆ. ಇದರೊಂದಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಸಂತೋಷ, ನೆಮ್ಮದಿ ದೊರೆಯಲಿದೆ. ಓದಿನ ಮೇಲಿನ ಉತ್ಸಾಹವೂ ವೃದ್ಧಿಯಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಭಯ ಬಿಟ್ಟು, ಆತ್ಮಸ್ಥೆರ್ಯದಿಂದ ಪರೀಕ್ಷೆ ಎದುರಿಸಬೇಕು ಎಂದರು.

ರೆವಿನ್ಯೂ ಇನ್‌ಸ್ಪೆಕ್ಟರ್ ಪ್ರಕಾಶ್, ಸಿಬ್ಬಂದಿ ಸಂತೋಷ್, ನಾಗರಾಜು ಸೇರಿದಂತೆ ವಸತಿ ಶಾಲೆ ಶಿಕ್ಷಕರು, ಸಿಬ್ಬಂದಿ ಇತರರಿದ್ದರು.

ಶ್ರದ್ಧೆಯಿಂದ ಪಾಠ ಕಲಿಯಿರಿ: ಡಾ.ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿದ ತಹಶೀಲ್ದಾರ್ ಎಂ.ಮಮತಾ, ವಿದ್ಯಾರ್ಥಿಗಳನ್ನು ಪರಿಚಯಿಸಿಕೊಂಡು ಅವರ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದರು. ಪಠ್ಯ ಸಂಬಂಧ ಹಲವು ಪ್ರಶ್ನೆಗಳನ್ನು ಕೇಳಿ ಹಲವು ವಿಷಯಕ್ಕೆ ಸಂಬಂಧಿಸಿದಂತೆ ಬೋಧನೆ ಮಾಡಿದರು. ಗ್ರಾಮೀಣ ಭಾಗದ ಮಕ್ಕಳು ದಡ್ಡರಲ್ಲ. ಕಷ್ಟಪಟ್ಟು ಓದಿದರೇ ಸಾಧನೆ ಮಾಡಬಹುದು. ಇದಕ್ಕಾಗಿ ಶ್ರದ್ಧೆಯಿಂದ ಪಾಠ ಪ್ರವಚನ ಪಡೆದು ಉನ್ನತ ಶಿಕ್ಷಣ ಪಡೆಯಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಶಿಸ್ತು ಮೈಗೂಡಿಸಿಕೊಳ್ಳಬೇಕು. ಜತೆಗೆ ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.