ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ವಿ.ಭ. ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ ಮಾತನಾಡಿದರು. ಪ್ರಕಾಶ ಉಡುಪಿಕರ, ವಿಕಾಸ ದರಬಾರ, ಟಿ.ಆರ್. ಕುಲಕರ್ಣಿ ಮತ್ತಿತರರಿದ್ದಾರೆ. 
ಜಿಲ್ಲೆ

ಸವಾಲುಗಳನ್ನು ಧೈರ್ಯದಿಂದ ಎದುರಿಸಿ

ದತ್ತಾತ್ರೇಯ ಪಿ ಕುಲಕರ್ಣಿ

ವಿಜಯಪುರ: ಸದ್ಯದ ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆ ವಿನೂತನ ತಂತ್ರಜ್ಞಾನಗಳ ಬಗ್ಗೆ ಅರಿವು ಪಡೆಯುವುದು ಅತ್ಯವಶ್ಯಕವಾಗಿದೆ. ಅಲ್ಲದೆ, ಅವುಗಳ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿ.ಭ. ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಬರುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಮೂಲಕ ನಿರಂತರ ಶ್ರಮ ಹಾಕಿ ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪ್ರಕಾಶ ಉಡುಪಿಕರ ಮಾತನಾಡಿ, ವಿದ್ಯಾರ್ಥಿಗಳು ಸಮಯದ ಮಹತ್ವ ಅರಿತು ಸ್ಪಷ್ಟ ಗುರಿಯೊಂದಿಗೆ ಮುನ್ನಡೆಯಬೇಕು. ಅಲ್ಲದೆ, ಗುರುಹಿರಿಯರನ್ನು ಗೌರವಿಸುವ ಸ್ವಭಾವ ಬೆಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಸಂಘದ ಸದಸ್ಯ ವಿಕಾಸ ದರಬಾರ ಮಾತನಾಡಿ, ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಯಶಸ್ಸನ್ನು ಪಡೆಯಬೇಕು ಎಂದರು.

ಪ್ರಾಚಾರ್ಯ ಟಿ.ಆರ್. ಕುಲಕರ್ಣಿ (ಜಾಲವಾದ) ಸ್ವಾಗತಿಸಿದರು. ಉಪನ್ಯಾಸಕ ಎ.ಕೆ. ಸಣ್ಣಿಂಗಮ್ಮನವರ ಪರಿಚಯಿಸಿದರು. ಎ.ಎಸ್. ಕುಲಕರ್ಣಿ ವಾರ್ಷಿಕ ವರದಿ ವಾಚಿಸಿದರು. ಜಿ.ಬಿ. ಕುಲಕರ್ಣಿ ನಿರೂಪಿಸಿದರು. ವಿ.ಬಿ. ಕುಲಕರ್ಣಿ ವಂದಿಸಿದರು.

ಸಂಘದ ಉಪಾಧ್ಯಕ್ಷ ಕೆ.ಜಿ. ದೇಶಪಾಂಡೆ, ಜೆ.ಎಸ್. ಛಪ್ಪರ ಮತ್ತಿತರರಿದ್ದರು.