ಜಿಲ್ಲೆ

ಬಿಜಾಪುರದಲ್ಲಿ ಗೋಳಗುಮ್ಮಟ ಎಷ್ಟು ಮುಖ್ಯವೋ ಫ.ಗು.ಹಳಕಟ್ಟಿ ಎಂಬ ವಚನಗುಮ್ಮಟವೂ ಅಷ್ಟೇ ಮುಖ್ಯ !

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಗ್ರಹಿಸಿ, ಪ್ರಚುರ ಪಡಿಸಿ, ಪರಿಚಯಿಸದಿದ್ದರೆ ನಾಡಿನ ಶ್ರೇಷ್ಠ ಸಾಹಿತ್ಯ ಪ್ರಕಾರವೊಂದು ಸಾಹಿತ ಲೋಕಕ್ಕೆ ಪರಿಚಯವೇ ಆಗುತ್ತಿರಲಿಲ್ಲ ಎಂದು ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ ಹೇಳಿದರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್, ವಚನ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಫ.ಗು ಹಳಕಟ್ಟಿ ಅವರ ಜನ್ಮ ದಿನ ಹಾಗೂ ವಚನಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಚನ ಸಾಹಿತ್ಯದ ಪ್ರಸಾರಕ್ಕಾಗಿ ತಾವು ವಾಸವಿದ್ದ ಮನೆಯನ್ನು ಮಾರಿ ಬಂದ ಹಣದಲ್ಲಿ ಹಿತಚಿಂತಕ ಎಂಬ ಪ್ರೆಸ್ ಆರಂಭಿಸಿ, ವಚನ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಹಳಕಟ್ಟಿ ಅವರದ್ದು ಎಂದರು.

ಬಿಜಾಪುರದಲ್ಲಿ ಗೋಳಗುಮ್ಮಟ ಎಷ್ಟು ಮುಖ್ಯವೋ, ಹಾಗೆಯೇ ಫ.ಗು.ಹಳಕಟ್ಟಿ ಎಂಬ ವಚನಗುಮ್ಮಟವೂ ಅಷ್ಟೇ ಮುಖ್ಯ. ತಾಳೆಗರಿ ರೂಪದಲ್ಲಿದ್ದ ವಚನ ಸಾಹಿತ್ಯವನ್ನು ಸಂಗ್ರಹಿಸಿ ಫ.ಗು.ಹಳಕಟ್ಟಿ ಅವರು ಅದನ್ನು ಕಾಪಿ ಮಾಡಿ, ಮುದ್ರಿಸಿ ಹಂಚುವ ಮೂಲಕ ಅಂದಿಗೆ ಜನರಿಗೆ ಪರಿಚಯವಿದ್ದ 25 ವಚನಕಾರರ ಸಂಖ್ಯೆ 250ಕ್ಕೇರಿತ್ತು. ಅಂದಿನ ಮೈಸೂರು ಸಂಸ್ಥಾನ ಇವರ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಅವರು ಸಂಪಾದಿಸಿದ ವಚನ ಸಾಹಿತ್ಯ, ಗಣಭಾಷಿತ ರತ್ನಮಾಲೆ ಕೃತಿಗಳು ಇಂದಿಗೂ ನಾಡಿನ ಶ್ರೇಷ್ಠ ಕೃತಿಗಳಾಗಿವೆ ಎಂದು ಬಣ್ಣಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅಧ್ಯಕ್ಷತೆವಹಿಸಿದ್ದರು. ನಗರ ಠಾಣೆ ಸರ್ಕಲ್ ಇನ್ಸೆಪೆಕ್ಟರ್ ದಿನೇಶ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಕಸಾಪ ಖಜಾಂಚಿ ಎಂ.ಎಚ್.ನಾಗರಾಜು,ಉಮಾಮಹೇಶ್, ಸತೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶಕುಮಾರ್ ಮತ್ತಿತರರು ಉಪಸ್ಥಿತರಿದ್ದರು.