ಜಿಲ್ಲೆ

ಉತ್ಪಾದನೆ ಹೆಚ್ಚಿದರೆ ಎಲ್ಲರಿಗೂ ಪೌಷ್ಠಿಕಯುಕ್ತ ಆಹಾರ

Chitradurga

ಚಿತ್ರದುರ್ಗ: ಎಲ್ಲರಿಗೂ ಪೌಷ್ಠಿಕಯುಕ್ತ ಆಹಾರ ತಲುಪ ಬೇಕು ಎಂದಾದರೆ ಆಹಾರ ಉತ್ಪಾದನೆ ಇನ್ನಷ್ಟು ಹೆಚ್ಚಾಗಬೇಕೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಪಿ.ರಮೇಶ್‌ಕುಮಾರ್ ಹೇಳಿದರು.

ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಶುಕ್ರವಾರ ವಿಶ್ವ ಆಹಾರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ಆಹಾರದ ಮಹತ್ವದ ಕುರಿತು ಜಾಗೃತಿ ಮೂಡಬೇಕು.

ವಾರ್ಷಿಕ ದೇಶದಲ್ಲಿ 316 ಮಿಲಿಯನ್ ಟನ್ ಆಹಾರ ಉತ್ಪತ್ತಿಯಾಗುತ್ತಿದೆ. ರಾಜ್ಯದಲ್ಲಿ ಇದರ ಪ್ರಮಾಣ 137 ಮಿಲಿಯನ್ ಟನ್ ಇದೆ.ಆಹಾರ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯ ಪಾತ್ರ ಪ್ರಮುಖವಾಗಿದೆ ಎಂದರು.

ಹಾಸನ ಕೃಷಿ ಕಾಲೇಜಿನ ನಿವೃತ್ತ ಡೀನ್ ಡಾ.ಎಲ್.ಮಂಜುನಾಥ್ ಮಾತನಾಡಿ,ಗ್ರಾಮೀಣರ ಜೀವನ ಮಟ್ಟ ಸುಧಾರಣೆ ಕೃಷಿ ತಂತ್ರಜ್ಞರ ಸಂಸ್ಥೆ ಉದ್ದೇಶವಾಗಿದೆ. ಆಹಾರದಿಂದ ಯಾರು ವಂಚಿತರಾಗಬಾರದು ಎನ್ನುವುದು ಈ ವರ್ಷದ ಘೋಷ ವಾಕ್ಯವಾಗಿದೆ. ವಿಶ್ವದಲ್ಲಿ 237 ಮಿಲಿಯನ್ ಜನರು ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ 2013ರಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಜಾರಿಗೊಳಿಸಿದೆ. ಒಕ್ಕಲುತನ ಉಳಿದರೆ ಜಗತ್ತು ಉಳಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಅಡಕೆ ಕೃಷಿ ಹೆಚ್ಚಾಗಿದೆ. ಕೃಷಿ ಭೂಮಿಗಳು ನಿವೇಶನ, ಕಟ್ಟಡಗಳಾಗಿ ಮಾರ್ಪಾಡಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಆಹಾರ ಸಂಕಷ್ಟ ಎದುರಾದರೆ ಅಚ್ಚರಿ ಪಡಬೇಕಿಲ್ಲ.

ವಿವೇಚನೆಯಿಲ್ಲದ ತಂತ್ರಜ್ಞಾನ ಬಳಕೆಯಿಂದಲೂ ಅಪಾಯ ತಪ್ಪಿದ್ದಲ್ಲ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸಮಗ್ರ ಕೃಷಿ ನೀತಿ ಜಾರಿಯೊಂದಿಗೆ ಸಿರಿಧಾನ್ಯಗಳಿಗೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕೆಂದರು.

ಕೃಷಿ ತಂತ್ರಜ್ಞರ ಸಂಸ್ಥೆ ಉಪಾಧ್ಯಕ್ಷ ಜಿ.ಸಿ.ರಂಗಸ್ವಾಮಿ,ಕಾರ‌್ಯದರ್ಶಿ ಜಿ.ಟಿ.ವೀರಭದ್ರರೆಡ್ಡಿ,ಜಂಟಿ ಕಾರ್ಯದರ್ಶಿ ಜಿ.ವೆಂಕಟೇಶ್, ಖ ಜಾಂಚಿ ಡಾ.ಸಿ.ತಿಪ್ಪೇಸ್ವಾಮಿ,ಸದಸ್ಯರಾದ ಕಟ್ಟಾ ಶ್ರೀನಿವಾಸರೆಡ್ಡಿ,ಎನ್.ಮೂರ್ತಿನಾಯ್ಕ,ಎಚ್.ಎಸ್.ಮಂಜುನಾಥ,ಟಿ.ಆರ್.ಯ ಶವಂತಕುಮಾರ್ ಮತ್ತಿತರರು ಇದ್ದರು. ಅಂರ್ತಜಲ ತಜ್ಞ ಡಾ.ಎನ್.ಜೆ.ದೇವರಾಜರೆಡ್ಡಿ, ಡಾ.ಪ್ರಕಾಶ್ ಕೆರೂರ್, ಎಸ್.ಹನುಮಂತ ರಾಯರೆಡ್ಡಿ ಹಾಗೂ ಎಸ್.ಚಂದ್ರಯ್ಯರನ್ನು ಸನ್ಮಾನಿಸಲಾಯಿತು.