ಜಿಲ್ಲೆ

ವಚನ ಸಾಹಿತ್ಯಕ್ಕೆ ಫ.ಗು.ಹಳಕಟ್ಟಿ ಕೊಡುಗೆ ಅಪಾರ

ಮೈಸೂರು: ಕಲ್ಯಾಣದಲ್ಲಿ ಕ್ರಾಂತಿ ನಡೆದ ಬಳಿಕ ವಚನ ಸಾಹಿತ್ಯ ಉಳಿಸುವಲ್ಲಿ ಶರಣರ ಕೊಡುಗೆ ಅಪಾರ ಎಂದು ಬಸವತತ್ವ ಪ್ರಚಾರಕಿ ಮಾತೆ ಬಸವಾಂಜಲಿದೇವಿ ಹೇಳಿದರು.
ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಚನ ಸಂಗ್ರಹಕಾರ ಫ.ಗು.ಹಳಕಟ್ಟಿ ಜನ್ಮದಿನೋತ್ಸವ, ವಚನ ಸಂರಕ್ಷಣಾ ದಿನಾಚರಣೆ, ಗುರುವಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಲ್ಯಾಣದ ಕ್ರಾಂತಿ ಸಂದರ್ಭ ಕೆಲವರು ವಚನಗಳನ್ನು ನಾಶಪಡಿಸಲು ಯತ್ನಿಸಿದ್ದರು. ಫ.ಗು.ಹಳಕಟ್ಟಿ ಅವರು ತಮ್ಮೆಲ್ಲಾ ಸಂಪತ್ತನ್ನು ಕಳೆದುಕೊಂಡರೂ ವಚನವೆಂಬ ಅನರ್ಘ್ಯ ರತ್ನವನ್ನು ಉಳಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಬಸವಾಂಜಲಿ ದೇವಿ ಸ್ಮರಿಸಿದರು.
ಬಸವಣ್ಣನವರ ನೈಜ ಇತಿಹಾಸವನ್ನು ಪಠ್ಯದ ಮೂಲಕ ಮಕ್ಕಳಿಗೆ ತಲುಪಿಸುವ ಕೆಲಸ ಈಗ ಆಗುತ್ತಿದೆ.
ಲಿಂಗಾಯತ, ವೀರಶೈವ ಎಂಬ ಗೊಂದಲದ ವಾತಾವರಣದಲ್ಲೂ ಬಸವ ತತ್ವದ ನೈಜತೆ ಪ್ರತಿಪಾದನೆಗೆ
ಅವಕಾಶ ದೊರಕುತ್ತಿದೆ. ಸಮಾಜಕ್ಕೆ ಸತ್ಯ ತಿಳಿಸುವ ನಿಟ್ಟಿನಲ್ಲಿ ಇವೆಲ್ಲವೂ ಪ್ರಮುಖ ಹೆಜ್ಜೆ ಎಂದು ಅವರು ಬಣ್ಣಿಸಿದರು.
ಪತ್ರಕರ್ತ ಬನ್ನೂರು ರಾಜು ಮಾತನಾಡಿ, ಫ.ಗು.ಹಳಕಟ್ಟಿ ಅವರ ಜನ್ಮದಿನವನ್ನು ರಾಜ್ಯ ಸರ್ಕಾರ ವಚನ ಸಂರಕ್ಷಣಾ ದಿನಾಚರಣೆಯಾಗಿ ಸಂಭ್ರಮಿಸುತ್ತಿರುವುದು ಉತ್ತಮ ಬೆಳವಣಿಗೆ. ಜನರು ಇದಕ್ಕೆ ಸಕ್ರಿಯವಾಗಿ ಸ್ಪಂದಿಸಬೇಕು ಎಂದು ಹೇಳಿದರು. ಹೊಸಮಠದ ಶ್ರೀಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಲಯ ಉಪಾಧ್ಯಕ್ಷ ಬಿ.ಆರ್.ನಟರಾಜ ಜೋಯಿಸ್, ಲಯನ್ಸ್ ಸಂಸ್ಥೆಯ ಸುರೇಶ್, ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಇದ್ದರು.