ಜಿಲ್ಲೆ

ಎಲ್ಲೆಲ್ಲೂ ಸಿಸಿ ಕ್ಯಾಮರಾಗಳ ಕಣ್ಣು

Davangere - Desk - Mahesh Babu E

ಚಿತ್ರದುರ್ಗ: ಶೋಭಾಯಾತ್ರೆ ಹಾಗೂ ಗಣೇಶ ವಿಸರ್ಜನೆ ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆ ಸಂಪೂರ್ಣ ಸಜ್ಜು ಮಾಡಿಕೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಹೇಳಿದರು.

ನಗರದ ಡಿವೈಎಸ್‌ಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಷ್ಠಾನ ಸ್ಥಳ ಜೈನಧಾಮದಿಂದ ಅ.8ರ ಬೆಳಗ್ಗೆ 11ಕ್ಕೆ ಆರಂಭವಾಗುವ ಮೆರವಣಿಗೆ ರಾತ್ರಿ 10.30ರ ಸಮಯಕ್ಕೆ ಚಂದ್ರವಳ್ಳಿ ತಲುಪಲಿದ್ದು, ಯಾವುದೇ ಅಹಿತಕರ ಘಟನೆಗಳಾಗದಂತೆ ಬಿಗಿಬಂದೋಬಸ್ತ್ ಮಾಡಲಾಗಿದೆ ಎಂದರು.

ಎಸ್‌ಪಿ, ಮೂವರು ಎಎಸ್‌ಪಿ, 20 ಡಿವೈಎಸ್‌ಪಿ, 40 ಸರ್ಕಲ್ ಇನ್ಸ್‌ಪೆಕ್ಟರ್, 110 ಸಬ್‌ಇನ್ಸ್‌ಪೆಕ್ಟರ್ ಸಹಿತ ಮೂರು ಸಾವಿರಕ್ಕೂ ಹೆ ಚ್ಚು ಪೊಲೀಸರು ಹಾಗೂ ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ನಗರದ 14 ವಲಯಗಳಲ್ಲಿ ನಿರಂತರ 24 ತಾಸು ಮೊಬೈಲ್ ಪೆಟ್ರೋಲಿಂಗ್ ಇರುತ್ತದೆ. ಗಣೇಶ ವಿಸರ್ಜನೆ ಬಳಿಕವೂ ಅ.9ರ ಬೆಳಗ್ಗೆ ವರೆಗೂ ಪೊಲೀಸರ ನಿಗಾ ಇರಲಿದೆ. ಅನ್ಯ ಜಿಲ್ಲೆಗಳಿಂದಲೂ ಹೆಚ್ಚುವರಿಯಾಗಿ ಅಧಿಕಾರಿ-ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಮೆರವಣಿಗೆ ಮಾರ್ಗ ಬಿಡಿ ರಸ್ತೆಯ ಉದ್ದಕ್ಕೂ, ಈ ರಸ್ತೆಯನ್ನು ಸಂಪರ್ಕಿಸುವ ಅಡ್ಡ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ಪಿಟಿ ಝೆಡ್, ಬುಲೆಟ್ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದರು.

ಆಯ್ದ 29 ಸ್ಥಗಳಲ್ಲಿ ನಿರ್ಮಿಸಿರುವ ವಾಚ್ ಟವರ್‌ಗಳಲ್ಲಿ ಹಾಗೂ ಕೇಂದ್ರೀಕೃತ ಸ್ಥಳದಿಂದ ಮೆರವಣಿಗೆ ನಿಗಾ ವಹಿಸಲಾಗುವುದು. ನಗ ರದ ಸುತ್ತಮುತ್ತ 9 ಸ್ಥಳಗಳಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಲಾಗುವುದು. ಈ ವೇಳೆ ಮದ್ಯ, ಗಾಂಜಾ ಮತ್ತಿತರ ಮಾದಕ ವಸ್ತು ಸೇವಿಸಿ ಬಂದವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು. ನಗರದ 10 ಕಿಮೀ ವ್ಯಾಪ್ತಿಯಲ್ಲಿ ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರ ವರೆಗೆ ಮದ್ಯ ಮಾರಾಟ ನಿಷೇಧಿಸಿ ಡಿಸಿ ಆದೇಶಿಸಿದ್ದಾರೆ ಎಂದು ಹೇಳಿದರು.

ನಗರಕ್ಕೆ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ನಗರದ ನಾಲ್ಕು ದಿಕ್ಕಿನಲ್ಲೂ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಎಎಸ್‌ಪಿ ಕುಮಾರಸ್ವಾಮಿ, ರಾಯಚೂರು ಎಎಸ್‌ಪಿ ಶಿವಕುಮಾರ್ ಇದ್ದರು.

ಸೋಷಿಯಲ್ ಮೀಡಿಯಾಗಳ ಮೇಲೂ ನಿಗಾ: ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲು ಈಗಾಗಲೇ ಠಾಣೆ ಮತ್ತು ಜಿಲ್ಲಾಮಟ್ಟದಲ್ಲಿ ವಿಶೇಷ ಸೆಲ್‌ಗಳು ನಿರ್ವಹಿಸುತ್ತಿದ್ದು, ಸುಳ್ಳು ಸುದ್ದಿಗಳನ್ನು ಹಬ್ಬಿಸುವಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ತಿಳಿಸಿದರು. ತುರ್ತು ಸಂದರ್ಭಕ್ಕಾಗಿ 4 ಅಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳನ್ನು ಕಾಯ್ದಿರಿಸಲಾಗಿದೆ. ಬೆಸ್ಕಾಂ ಸಿಬ್ಬಂದಿ ನಮ್ಮೊಂದಿಗೆ ಇರಲಿದ್ದಾರೆ. ಕುಡಿವ ನೀರು ಹಾಗೂ ಅಲ್ಲಲ್ಲಿ ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ನಗರಸಭೆ ಮಾಡಲಿದೆ. 850 ರೌಡಿಶೀಟರ್, ಕಮ್ಯೂನಲ್ ಗೂಂಡಾಗಳನ್ನು ಬಾಂಡ್ ಓವರ್ ಮಾಡಲಾಗಿದೆ ಎಂದು ಹೇಳಿದರು.