ವಿಜಯವಾಣಿ ಸುದ್ದಿಜಾಲ ನಂದಗುಡಿ
ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿವಹಿಸಿದರೆ ವಯಸ್ಸಾದರೂ ಯಾವುದೇ ತೊಂದರೆ ಇಲ್ಲದೆ ಆರೋಗ್ಯವಂತರಾಗಿ ಬದುಕು ನಡೆಸಬಹುದು ಎಂದು ವೈದ್ಯ ಡಾ. ಭಾಸ್ಕರ್‌ರೆಡ್ಡಿ ಹೇಳಿದರು.
ನಂದಗುಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಚಾರಿಟಬಲ್ ಟ್ರಸ್ಟ್, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಿಂಟೋ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕಣ್ಣಿನ ಪೊರೆ ರೋಗ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು. ಪೌಷ್ಟಿಕ ಆಹಾರ ಸೇವಿಸಿದರೆ ಆರೋಗ್ಯ ವೃದ್ಧಿಯಾಗುವುದಲ್ಲದೆ ಅಂಧತ್ವ ದೂರಾಗಿ ಆರೋಗ್ಯವಂತ ಕಣ್ಣು ಕಾಪಾಡಿಕೊಳ್ಳಬಹುದು ಎಂದರು.
ಮೊಬೈಲ್ ಬಳಕೆ ಹೆಚ್ಚಾಗಿದ್ದು, ಕತ್ತಲಿನ ವಾತಾವರಣದಲ್ಲಿ ಮೊಬೈಲ್ ನೋಡುವುದರಿಂದ ಕಣ್ಣಿನ ದೃಷ್ಟಿ ಹಾಳಾಗುತ್ತದೆ ಎಂದರು.
ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಜೈಸಿ ಮಾತನಾಡಿ, ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದಾರ್ಥಗಳ ಆಯ್ಕೆಯಲ್ಲಿನ ವ್ಯತ್ಯಾದಿಂದ ಯುವ ಪೀಳಿಗೆಯಲ್ಲಿಯೇ ಹೆಚ್ಚಾಗಿ ಕಾಯಿಲೆಗಳು ಕಂಡು ಬರುತ್ತಿವೆ ಎಂದ ಅವರು, ಉಚಿತ ತಪಾಸಣೆ ಶಿಬಿರದಿಂದ ಬಡ ಜನರಿಗೆ ತುಂಬಾ ಅನುಕೂಲವಾಗಿದ್ದು, ಇದರ ಸದುಪಯೋಗ ಪಡೆದು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
45ಕ್ಕೂ ಹೆಚ್ಚು ಮಂದಿತಪಾಸಣೆಗೆ ಮಾಡಿಸಿಕೊಂಡರು. 16 ಮಂದಿಗೆ ಕಣ್ಣಿನ ಪೂರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಆಸ್ಪತ್ರೆ ಸಿಬ್ಬಂದಿ ಮಂಜುಳಾ, ಶಶಿ, ಸಾನಂದಪ್ಪ, ಅಶತ್ಥ್, ನಾಗರಾಜರಾವ್ ಬೋಸಲೆ, ಮಧು, ಸಾಧನಾ ಉಪಸ್ಥಿತರಿದ್ದರು.