ಜಿಲ್ಲೆ

ಕಣ್ಣಿನ ಆರೋಗ್ಯ ಪಾಲನೆಗೆ ಒತ್ತು ನೀಡಿ

ಎ. ಆರ್. ರಘುರಾಮ

ಕೊಳ್ಳೇಗಾಲ : ಮಕ್ಕಳ ಕಣ್ಣಿನ ಆರೋಗ್ಯ ಪಾಲನೆಗೆ ಪಾಲಕರು ಹೆಚ್ಚು ಒತ್ತು ನೀಡಬೇಕು ಎಂದು ಎಚ್.ಕೆ. ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಹೇಳಿದರು. ಪಟ್ಟಣದ ವಿಶ್ವ ಚೇತನ ವಿದ್ಯಾಸಂಸ್ಥೆಯಲ್ಲಿ ಶನಿವಾರ ಟ್ರಸ್ಟ್ , ರೋಟರಿ ಮಿಡ್ ಟೌನ್ ಕೊಳ್ಳೇಗಾಲ, ಅರವಿಂದ ಕಣ್ಣಿನ ಆಸ್ಪತ್ರೆ ಕೊಯಮತ್ತೂರು ಮತ್ತು ವಿಶ್ವ ಚೇತನ ಸಮೂಹ ವಿದ್ಯಾ ಸಂಸ್ಥೆ ಸಹಯೋಗದಲ್ಲಿ ಉಚಿತವಾಗಿ ಆಯೋಜಿಸಿದ್ದ ಮಕ್ಕಳ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಅತೀ ಹೆಚ್ಚು ಸಮಯ ಮೊಬೈಲ್ ಫೋನ್ ಬಳಕೆ ಮಾಡುವ ಮಕ್ಕಳಿಗೆ ಕಣ್ಣಿನ ಸಮಸ್ಯೆ ಎದುರಾಗುತ್ತಿದೆ. ಪಾಲಕರು ಈ ಬಗ್ಗೆ ನಿಗಾ ವಹಿಸಬೇಕು. ಅಗತ್ಯಕ್ಕೂ ಮೀರಿದ ಮೊಬೈಲ್ ಬಳಕೆಯಿಂದ ಮಕ್ಕಳನ್ನು ನಿಯಂತ್ರಿಸಬೇಕು. ಕಣ್ಣು ನಮ್ಮ ದೇಹದ ವಿಶೇಷ ವಾದ ಮತ್ತು ಅಷ್ಟೇ ಸೂಕ್ಷ್ಮವಾದ ಅಂಗ. ಆದ್ದರಿಂದ ಕಣ್ಣಿನ ಅರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ಸಲಹೆ ನೀಡಿದರು.
ದಿ.ಎಚ್. ಕೃಷ್ಣಸ್ವಾಮಿ ಅವರ ಆಶಯದಂತೆ ಸಮಾಜಮುಖಿ ಕಾರ್ಯಗಳಲ್ಲಿ ನಮ್ಮ ಟ್ರಸ್ಟ್ ತೊಡಗಿಸಿಕೊಂಡಿದೆ. ಪ್ರತಿ ತಿಂಗಳು ಕಣ್ಣಿನ ತಪಾಸಣೆ ಉಚಿತ ಶಿಬಿರ ಆಯೋಜನೆ ಮಾಡಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಮಕ್ಕಳ ನೇತ್ರ ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಕನ್ನಡಕ ವಿತರಿಸಲಾಗಿದೆ ಎಂದರು.
ಶಿಬಿರದಲ್ಲಿ ಒಟ್ಟು 436 ಮಕ್ಕಳ ನೇತ್ರ ತಪಾಸಣೆ ಮಾಡಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ನಂದೀಶ, ರೋಟರಿ ಮಿಡ್ ಟೌನ್ ಅಧ್ಯಕ್ಷ ದಕ್ಷಿಣಾ ಮೂರ್ತಿ, ಕಾರ್ಯದರ್ಶಿ ಪ್ರಸನ್ನ ಕುಮಾರ್, ಅರವಿಂದ ಕಣ್ಣಿನ ಆಸ್ಪತ್ರೆ ಸಂಯೋಜಕ ವಿಜಯ್ ಕುಮಾರ್, ತಜ್ಞರಾದ ಡಾ.ರಸ್ನಾ, ಡಾ. ಫೈಜಾ, ವಿಶ್ವ ಚೇತನ ಸಮೂಹ ವಿದ್ಯಾ ಸಂಸ್ಥೆಯ ಸಂಯೋಜಕ ರಾಜೇಶ್, ವ್ಯವಸ್ಥಾಪಕ ರವೀಂದ್ರ ಇದ್ದರು.