ದಾವಣಗೆರೆ: ಪ್ರಕೃತಿದತ್ತವಾದ ಪರಿಸರದಿಂದ ಸಹಕಾರ ಪಡೆಯುತ್ತ ಬೆಳೆಯುವ ನಾವುಗಳು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ಹೇಳಿದರು.
ನಗರದ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ಅಕ್ಕಮಹಾದೇವಿ ಸಮಾಜ, ಅಕ್ಕಮಹಾದೇವಿ ನೇತ್ರದಾನ ಪ್ರೇರಣಾ ಸಮಿತಿ,
ಜಿಲ್ಲಾ ಅಂಧತ್ವ ನಿಯಂತ್ರಣ ಸಮಿತಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನೇತ್ರದಾನ ಪ್ರೇರಣಾ ಪಕ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘ ಸಂಸ್ಥೆಗಳು ನಡೆಸುವ ಸಾಮಾಜಿಕ ಕಾರ್ಯಗಳು ಯುವಪೀಳಿಗೆಗೆ ಮಾದರಿಯಾಗಿವೆ ಎಂದರು.
ಬೇರೆಲ್ಲ ದಾನಗಳಿಗಿಂತ ನೇತ್ರದಾನ ಬಹುಮುಖ್ಯವಾದದ್ದು. ಈ ಹಿಂದೆ ನೇತ್ರದಾನ ಮಾಡಲು ಹಿಂದೇಟು ಹಾಕುತ್ತಿದ್ದರು. ಈಗ ಸ್ವಯಂ ಪ್ರೇರಿತವಾಗಿ ಜನರು ನೇತ್ರದಾನಕ್ಕೆ ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ನೇತ್ರ ತಜ್ಞ ಡಾ.ಎಸ್.ಎನ್.ಕೋಲಕೂರ್ ಮಾತನಾಡಿ, ಪ್ರತಿ ವರ್ಷ ಆ.25ರಿಂದ ಸೆ.8ರವರೆಗೆ ರಾಷ್ಟ್ರದಾದ್ಯಂತ ನೇತ್ರದಾನ ಪ್ರೇರಣಾ ಪಕ್ಷಾಚರಣೆ ಆಚರಿಸಲಾಗುತ್ತಿದೆ.
ದೇಶದಲ್ಲಿ ಪ್ರತಿ ವರ್ಷ 1.25 ಲಕ್ಷ ಜನರು ಪಾರದರ್ಶಕ ಪಟಲ ದೋಷದಿಂದ ಬಳಲುತ್ತಿದ್ದಾರೆ. ಬೇರೆ ಅಂಗವನ್ನು ಕಳೆದುಕೊಂಡರೂ ಜೀವಿಸಬಹುದು. ಆದರೆ ಕಣ್ಣುಗಳಿರದಿದ್ದರೆ ಜೀವನ ಕಷ್ಟವಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ 37 ನೇತ್ರ ಭಂಡಾರಗಳಿದ್ದು, ಈ ಪೈಕಿ 9 ಮಾತ್ರ ಸರ್ಕಾರಿ ಸೌಮ್ಯದ ಸಂಸ್ಥೆಗಳಾಗಿವೆ.
ದಾವಣಗೆರೆಯಲ್ಲಿ ಒಂದು ನೇತ್ರ ಭಂಡಾರವಿದೆ. ಮೃತಪಟ್ಟ ನಂತರವೂ ನಿಮ್ಮ ಕಣ್ಣುಗಳು ಜೀವಂತವಾಗಿರಬೇಕಾದರೆ ನೇತ್ರದಾನ ಮಾಡಿ ಎಂದು ಕರೆ ನೀಡಿದರು.
ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಕೆ.ಕೆ.ಸುಶೀಲಮ್ಮ, ಗೌರವ ಅಧ್ಯಕ್ಷೆ ನೀಲಗುಂದ ಜಯಮ್ಮ, ನೇತ್ರದಾನ ಪ್ರೇರಣಾ ಸಮಿತಿ ಅಧ್ಯಕ್ಷ ವಿಜಯ ಬಸವರಾಜ್, ಕಾರ್ಯದರ್ಶಿ ಮಂಜುಳ ಕಾಯಿ, ಡಾ.ಮಂಜುನಾಥ ಪಾಟೀಲ್, ನೇತ್ರಾದಿಕಾರಿ ಡಾ.ಎಸ್.ಕೆ.ರಂಗನಾಥ್ ಉಪಸ್ಥಿತರಿದ್ದರು.