ಹುಬ್ಬಳ್ಳಿ: ಅಂಧರಿಗೆ ದೃಷ್ಟಿ ನೀಡುವ ನೇತ್ರದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆ. 25ರಿಂದ ಸೆ. 8ರ ವರೆಗೆ ನಡೆಯುವ "ನೇತ್ರದಾನ ಪಾಕ್ಷಿಕ' ಅಂಗವಾಗಿ ನಗರದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ ಜಿಎಂ ನೇತ್ರ ಭಂಡಾರ ಹಾಗೂ ಸಂಶೋಧನಾ ಪ್ರತಿಷ್ಠಾನ ಟ್ರಸ್ಟ್ ಆಶ್ರಯದಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ಹೆಚ್ಚು ಜನರು ಸೇರುವ ಸಮಾರಂಭ, ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೇತ್ರದಾನದ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಜಾಗೃತರಾಗಿ ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ನೋಂದಣಿಯಾದವರ ಮರಣಾ ನಂತರ ನೇತ್ರದಾನದ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಇದಕ್ಕಾಗಿ ಈ ವರ್ಷದ "ನೇತ್ರದಾನ ಪಾಕ್ಷಿಕ'ದಲ್ಲಿ ತಿಳಿವಳಿಕೆ ನೀಡಲಾಗುತ್ತಿದೆ ಎಂದರು.
ದೇಶದಲ್ಲಿ 150 ಲಕ್ಷದಷ್ಟು ಮಂದಿ ಶಾಶ್ವತ ಅಂಧತ್ವದಿಂದ ಬಳಲುತ್ತಿದ್ದು, ಅವರಲ್ಲಿ ಸುಮಾರು 25 ಲಕ್ಷ ಜನರಿಗೆ ಕಾನಿರ್ಯ ಅಂಧತ್ವವಿದೆ. ಇವರಲ್ಲಿ ಐದು ಲಕ್ಷದಷ್ಟು ಜನ 14 ವರ್ಷ ಒಳಗಿನ ಮಕ್ಕಳಿದ್ದಾರೆ. ಪುನಿತ್ ರಾಜ್ ಕುಮಾರ್ ಅವರ ಮರಣಾ ನಂತರದ ಒಂದೇ ತಿಂಗಳಲ್ಲಿ ಒಂದು ಸಾವಿರದಷ್ಟು ಮಂದಿ ನೇತ್ರದಾನ ಮಾಡಿದ್ದರು. ನಂತರ ಆರು ತಿಂಗಳ ಅವಧಿಯಲ್ಲಿ ಒಂಬತ್ತು ಸಾವಿರದಷ್ಟು ಮಂದಿ ನೇತ್ರದಾನದ ಶಪಥ ಮಾಡಿದ್ದರು. ಇದೀಗ ದಾನಿಗಳ ಸಂಖ್ಯೆ ಇಳಿಮುಖವಾಗಿದೆ ಎಂದು ವಿವರಿಸಿದರು.
ಭಾರತದಲ್ಲಿ 11 ಲಕ್ಷ ಜನರು ನೇತ್ರ ಕಸಿಗೆ ಕಾಯುತ್ತಿದ್ದಾರೆ. ಶ್ರೀಲಂಕಾದಲ್ಲಿ ಮರಣಾ ನಂತರ ನೇತ್ರದಾನ ಕಡ್ಡಾಯ ಕಾನೂನು ಇದ್ದು, ಕೆಲವೊಮ್ಮೆ ಅಲ್ಲಿಂದ ನೇತ್ರಗಳನ್ನು ತರಿಸಿ ಅಗತ್ಯವಿದ್ದರೆಗೆ ಕಸಿ ಮಾಡಲಾಗುತ್ತಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಎಂ.ಎಂ. ಜೋಶಿ ಆಸ್ಪತ್ರೆಯಲ್ಲಿ 474 ಶಸ್ತ್ರಚಿಕಿತ್ಸೆ ನಡೆದಿವೆ ಎಂದು ಡಾ. ಎ.ಎನ್. ಶಾಸ್ತ್ರಿ ತಿಳಿಸಿದರು.
ನೇತ್ರದಾನಕ್ಕೆ ವಯಸ್ಸಿನ ಮಿತಿ ಇಲ್ಲ. ಯಾರು ಬೇಕಾದರೂ ಮಾಡಬಹುದು. ವ್ಯಕ್ತಿಯ ಮರಣದ ನಂತರ ಆರು ತಾಸಿನ ಒಳಗೆ ದಾನ ಮಾಡಬೇಕು. ಪಾಥಿರ್ವ ಶರೀರದ ಕಣ್ಣುಮುಚ್ಚಿ, ತನ್ನೀರುಪಟ್ಟಿ ಇಡಬೇಕು ಎಂದು ಡಾ. ಎಸ್. ಗುರುಪ್ರಸಾದ, ಡಾ. ಸತ್ಯಮೂರ್ತಿ ತಿಳಿಸಿದರು.