ಕುದೂರು : ಅಂಧತ್ವ ನಿವಾರಣೆಗಾಗಿ ಮಾಗಡಿ ತಾಲೂಕಿನ ಪ್ರತಿ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳನ್ನು ತಪಾಸಣೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳುವ ಕೆಲಸವನ್ನು ಜಿಲ್ಲಾಸ್ಪತ್ರೆಯ ನೇತ್ರ ತಜ್ಞರು ಮಾಡುತ್ತಿದ್ದಾರೆ ಎಂದು ತಾಲೂಕು ವಿಶೇಷ ಚೇತನ ಮಕ್ಕಳ ಉಸ್ತುವಾರಿ ಗೋಪಾಲ್ ತಿಳಿಸಿದರು.
ತಿಪ್ಪಸಂದ್ರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ನೇತ್ರ ತಪಾಸಣೆ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾಗಡಿ ತಾಲೂಕಿನಲ್ಲಿ ಹೋಬಳಿವಾರು ಜಿಲ್ಲಾಸ್ಪತ್ರೆಯ ನುರಿತ ನೇತ್ರ ತಜ್ಞರಿಂದ ನೇತ್ರ ತಪಾಸಣೆಗೆ ಒಳಪಡಿಸುವ ಕೆಲಸ ಮಾಡುತಿದ್ದೇವೆ. ಈಗಾಗಲೇ ಕಸಬಾ ಹೋಬಳಿಯಲ್ಲಿ 121 ಮಕ್ಕಳಿಗೆ ಹಾಗೂ ಮಾಡಬಾಳ್ ಹೋಬಳಿಯಲ್ಲಿ 61 ಮಕ್ಕಳಿಗೆ ನೇತ್ರ ತಪಾಸಣೆ ನಡೆಸಿ ಕನ್ನಡಕ ವಿತರಿಸಿದ್ದೇವೆ. ತಿಪ್ಪಸಂದ್ರ, ಕುದೂರು, ಸೋಲೂರು ಹೋಬಳಿಗಳಲ್ಲಿಯೂ ಪ್ರತಿ ವಿದ್ಯಾರ್ಥಿಗಳನ್ನು ಪರೀಕ್ಷಿಸಿ ನೇತ್ರ ಆರೈಕೆಯ ಬಗ್ಗೆ ತಿಳಿಸುವ ಕೆಲಸ ಮಾಡುತಿದ್ದೇವೆ ಎಂದರು.
ನೇತ್ರತಜ್ಞ ಡಾ. ರಂಗಸ್ವಾಮಿ ಮಾತನಾಡಿ, ಕಣ್ಣುಗಳ ಆರೈಕೆ ಮತ್ತು ಆರೋಗ್ಯ ಕಾಪಾಡಲು ಆಹಾರದಲ್ಲಿ ಸೊಪ್ಪು, ತರಕಾರಿಗಳನ್ನು ಹೆಚ್ಚಾಗಿ ಬಳಸಬೇಕು ಎಂದರು.
ಡಾ.ಗಂಗಲಕ್ಷ್ಮೀ, ಯತೀಶ್, ಮುಖ್ಯಶಿಕ್ಷಕ ರಾಜಣ್ಣ, ಗೋಪಾಲ್, ಕರ್ನಾಟಕ ಪಬ್ಲಿಕ್ ಶಾಲೆಯ ಸಿಬ್ಬಂದಿ, ರಾಮನಗರ ಜಿಲ್ಲಾ ಆಸ್ಪತ್ರೆಯ ನೇತ್ರ ಸಿಬ್ಬಂದಿ ಮತ್ತು ಮಕ್ಕಳು ಹಾಜರಿದ್ದರು.