ನಂಜನಗೂಡು: ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮೈಸೂರು ವಾಸನ್ ಕಣ್ಣಿನ ಆಸ್ಪತ್ರೆ ಮತ್ತು ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಸಹಯೋಗದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪ್ರಕಾಶ್ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಗಂಭೀರ ಸ್ವರೂಪದ ಕಾಯಿಲೆಯಾಗಿ ಪರಿಣಮಿಸುತ್ತಿದೆ. ಆರಂಭದಲ್ಲೇ ತಪಾಸಣೆ ಪಡೆದರೆ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದರು.
ಕಣ್ಣಿನ ತಪಾಸಣೆ ನಡೆಸಿ, ಅಗತ್ಯವಿದ್ದವರಿಗೆ ಉಚಿತವಾಗಿ ಕನ್ನಡಕ ವಿತರಿಸುವುದರ ಜತೆಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ವೈದ್ಯಾಧಿಕಾರಿಗಳ ತಂಡ ಕಣ್ಣಿನ ಪೊರೆ, ವಾರೆಗಣ್ಣು, ಹತ್ತಿರ ಮತ್ತು ದೂರದೃಷ್ಟಿ ದೋಷ, ನೀರು ಸೋರುವಿಕೆ, ಗ್ಲಾಕೋಮಾ, ಕಣ್ಣಿನಲ್ಲಿ ಗೀಜು ಬರುವುದು, ಕಣ್ಣಿನಲ್ಲಿ ಬಿರುಕು ಉಂಟಾಗುವುದು, ರಾತ್ರಿ ಕುರುಡು ಸೇರಿದಂತೆ ಇನ್ನಿತರ ಕಣ್ಣಿನ ಸಮಸ್ಯೆಗಳ ಕುರಿತು ಪರೀಕ್ಷೆ ನಡೆಸಿ ಕೆಲವರಿಗೆ ಕನ್ನಡಕಗಳ ಬಳಕೆಗೆ ಸಲಹೆ ನೀಡಿದರು.
ಸಕ್ಕರೆ ಕಾಯಿಲೆ ತಪಾಸಣೆ ನಡೆಸಿ ಔಷಧಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು. ಹೊಸಹಳ್ಳಿ, ಪಾಳ್ಯ, ಕರಳಪುರ, ದೇವಿರಮ್ಮನಹಳ್ಳಿ, ಕುರಹಟ್ಟಿ ಗ್ರಾಮಗಳಿಂದ ನೂರು ಹೆಚ್ಚು ಸಂಖ್ಯೆಯ ಜನರು ಆಗಮಿಸಿ ನೇತ್ರ ತಪಾಸಣೆ ಮಾಡಿಸಿಕೊಂಡರು.
ಡೇರಿ ಕಾರ್ಯದರ್ಶಿ ಮಹದೇವಯ್ಯ, ಗ್ರಾಮ ಪಂಚಾಯಿತಿ ಸಿಬ್ಬಂದಿ ಮಹೇಶ್, ಮುಖ್ಯಶಿಕ್ಷಕ ನಾಗರಾಜ್, ವಾಸನ್ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ಪರಿಮಳಾ, ನೇತ್ರಾಧಿಕಾರಿ, ಡಾ.ಪ್ರವೀಣ್ ಕುಮಾರ್, ಸಂಯೋಜಕ ಎ.ಎಂ ಮಹೇಶ್, ಯುವ ಕಾಂಗ್ರೆಸ್ ಮುಖಂಡ ಎಚ್.ಎಂ.ಚೆಲುವಸ್ವಾಮಿ ಭಾಗವಹಿಸಿದ್ದರು.