ವಿಜಯವಾಣಿ ಸುದ್ದಿಜಾಲ ವಿಜಯಪುರ
ಪ್ರತಿ ಜೀವಿಗೂ ಅತಿಮುಖ್ಯವಾದ ಅಂಗ ಕಣು. ಕಣ್ಣಿನ ಆರೋಗ್ಯ ಉತ್ತಮವಾಗಿರಬೇಕೆಂದರೆ ನಿಯಮಿತ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಪುರಸಭೆ ಅಧ್ಯಕ್ಷೆ ವಿಮಲಾ ಬಸವರಾಜ್ ತಿಳಿಸಿದರು.
ಪಟ್ಟಣದ ಪುರಸಭೆ ರೋಜ್‌ಗಾರ್ ಕಚೇರಿ ಆವರಣದಲ್ಲಿ ಪುರಸಭೆ ಹಾಗೂ ದೃಷ್ಟಿ ಕಣ್ಣಿನ ಆಸ್ವತ್ರೆಯಿಂದ ಪುರಸಭೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೇ ದೃಷ್ಟಿ ಸಮಸ್ಯೆ ಕಾಡುತ್ತಿದೆ. ಇದರಿಂದ ಎಲ್ಲರೂ ಕಣ್ಣಿಗೊಂದು ಗ್ಲಾಸ್ ಹಾಕಿಕೊಳ್ಳುವ ಅನಿವಾರ್ಯತೆ ಎದುರಾಗಿದ್ದು, ಮಕ್ಕಳಿಗೆ ಪಾಲಕರು ಹೆಚ್ಚು ಮೊಬೈಲ್ ಹಾಗೂ ಟಿವಿ ನೋಡಲು ಅವಕಾಶ ನೀಡಬಾರದು ಎಂದರು.
ದೃಷ್ಟಿ ಹಾಸ್ಪಿಟಲ್ ಮ್ಯಾನೇಜರ್ ಚಿಕ್ಕೇಗೌಡ ಮಾತನಾಡಿ, ಕಣ್ಣಿನ ಆರೋಗ್ಯಕ್ಕೆ ಬಹುಮುಖ್ಯವಾಗಿ ಬೇಕಾಗಿರುವುದು ಆರೋಗ್ಯಕರ ಕೊಬ್ಬಿನ ಅಂಶ, ಉತ್ತಮ ಪ್ರಮಾಣ ಪ್ರೊಟೀನ್‌ಯುಕ್ತ ಆಹಾರ ಅಗತ್ಯ. ಹಾಲು ಮತ್ತು ಹಾಲಿನ ಉತ್ಪನ್ನಗಳು ಕಣ್ಣು ಮಾತ್ರವಲ್ಲದೆ, ದೇಹದ ಆರೋಗ್ಯವನ್ನು ಕಾಪಾಡುತ್ತವೆ. ಮಾಂಸಾಹಾರಿಗಳಾಗಿದ್ದರೆ, ಸಂಸ್ಕರಿತ ಮಾಂಸಾಹಾರ ಸೇವಿಸದಿರುವುದು ಒಳ್ಳೆಯದು ಎಂದರು.
ಆಸ್ವತ್ರೆ ವೈದ್ಯ ಸಂಜಯ್ ಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ಹೆಚ್ಚು ಹೊತ್ತು ಮೊಬೈಲ್, ಕಂಪ್ಯೂಟರ್ ನೋಡುವುದರಿಂದ ಕಣ್ಣಿಗೆ ದಣಿವಾಗುತ್ತದೆ. ಹೀಗಾಗಿ ಪ್ರತಿ 20 ನಿಮಿಷಕ್ಕೊಮ್ಮೆ ಕನಿಷ್ಠ 5 ನಿಮಿಷವಾದರೂ ವಿಶ್ರಾಂತಿ ನೀಡಿ, ಇದರಿಂದ ದೃಷ್ಟಿ ಸಮಸ್ಯೆ ಬಾರದಂತೆ ತಡೆಯಬಹುದಾಗಿದೆ ಎಂದರು.