ಬೆಂಗಳೂರು: ಹವ್ಯಕರು ವಿಶಿಷ್ಟ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಜನ. ಬದುಕು, ಭಾಷೆ, ಆಹಾರ, ಹಬ್ಬ-ಹರಿದಿನ, ಕಲೆ, ಸಾಹಿತ್ಯ ಎಲ್ಲದರಲ್ಲೂ ವಿಭಿನ್ನತೆಯನ್ನು ಕಂಡು ಕೊಂಡಿರುವ ಸಮುದಾಯವಿದು. ಅಂತೆಯೇ ಅರಮನೆ ಮೈದಾನದಲ್ಲಿ ಶುಕ್ರವಾರದಿಂದ ಆರಂಭವಾಗಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸಮುದಾಯದ ಜನಜೀವನವನ್ನು ಪ್ರತಿಬಿಂಬಿಸುವ ವಿಶೇಷ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಬ್ರಾಹ್ಮಣ ಸಮಾಜದಲ್ಲಿ ಗಾಯಿತ್ರಿ ಮಂತ್ರದೊಂದಿಗೆ ನಿತ್ಯ ಸಂಧ್ಯಾವಂದನೆ ಕಡ್ಡಾಯ. ಅಂತೆಯೇ ಆರಾಧ್ಯ ದೇವತೆಯಾದ ಗಾಯಿತ್ರಿ ಮಾತೆಯ ಹೆಸರಿನಲ್ಲಿ ಅನಾವರಣಗೊಂಡಿರುವ ಗಾಯಿತ್ರಿ ಥೀಮ್ ಪಾರ್ಕ್ ಸಮ್ಮೇಳನಕ್ಕೆ ಬಂದವರ ಗಮನ ಸೆಳೆಯತ್ತಿದೆ. ಭಾರತದ ಸಪ್ತರ್ಷಿಗಳು, ಗಾಯಿತ್ರಿ ಮಾತ್ರೆಯ ಮೂರ್ತಿಯ ವಿರಾಟ ದರ್ಶನದೊಂದಿಗೆ ಜನಿವಾರ ತಯಾರಿಕೆ, ಹೋಮ, ಹವನ, ಪೂಜಾ ಪದ್ಧತಿಯ ಮಾಹಿತಿ ಇಲ್ಲಿದೆ. ಜೊತೆಗೆ ಮೂರು ದಿನಗಳ ಕಾಲ ನಿರಂತರ ಯಾಗ, ಯಜ್ಞ, ಹೋಮ, ಹವನದ ಮಂಡಲಗಳ ಸ್ಪರ್ಧೆ, ಪ್ರಾತ್ಯಕ್ಷಿಕೆ ನಡೆಯುತ್ತಿದೆ. ಭಗವದ್ಗೀತೆ ಪಠಣ, ದೇವರ ಭಜನೆ ಕಮ್ಮಟ ಕೂಡಾ ಆಯೋಜಿಸಲಾಗಿದೆ.
ಹವ್ಯಕರ ಸಂಸ್ಕೃತಿಯ ಭಾಗವಾಗಿರುವ ಆಹಾರ, ಅಡಿಕೆ ಕೃಷಿ, ಆಲೆಮನೆಗಳು ನಗರದ ಜನರಿಗೆ ಗ್ರಾಮೀಣ ಸೊಗಡನ್ನು ಪರಿಚಯಿಸುತ್ತಿದೆ. ಹವ್ಯಕರಲ್ಲಿ ಅತಿಹೆಚ್ಚು ಅಡಿಕೆ ಕೃಷಿಯಲ್ಲಿ ತೊಡಗಿದವರಿದ್ದು, ಅಡಿಕೆ ಸಸಿ ನೆಟ್ಟು ಬೆಳೆಸುವುದು, ಅಡಿಕೆ ಸುಲಿಯುವುದು, ಬೇಸುವುದು ಜೊತೆಗೆ ಈ ಚಟುವಟಿಕೆಗೆ ಬಳಸುವ ಎಲ್ಲ ಪಾರಂಪರಿಕ ವಸ್ತುಗಳನ್ನು ಪ್ರದರ್ಶಿಸಲಾಗುತ್ತದೆ. ಜೊತೆಗೆ ರೈತನ ಜೀವನಾಡಿಯಾಗಿರುವ ಗೋವುಗಳ ವಿವಿಧ ತಳಿಗಳನ್ನು ಪ್ರದರ್ಶಿಸುವ ಗೋಶಾಲೆ ವಿಶೇಷವಾಗಿದೆ. ಹವ್ಯಕರಲ್ಲಿ ಜೋನಿ ಬೆಲ್ಲದ ಬಳಕೆ ಹೆಚ್ಚು. ಅರಮನೆ ಮೈದಾನದಲ್ಲಿ ಕೋಣಗಳ ಆಲೆಮನೆಯನ್ನು ನಿರ್ಮಿಸಿ ಕಬ್ಬನ್ನು ಅರೆದು ಜೋನಿ ಬೆಲ್ಲ ಮಾಡುವ ಪ್ರಕ್ರಿಯೆ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಹವ್ಯಕರು ಪಾರಂಪರಿಕವಾಗಿ ನಡೆಸಿಕೊಂಡು ಬಂದಿರುವ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿವೆ. ಹವ್ಯಕ ಶೈಲಿಯ ಆಹಾರ ಪ್ರದರ್ಶನದ ಪಾಕಶಾಲೆ ನೋಡುಗರ ಬಾಯಲ್ಲಿ ನೀರೂರಿಸದಿರದು.
ಹವ್ಯಕ ಸಮಾಜದ ಬಂಧುಗಳು ಉದ್ಯೋಗದ ಜೊತೆಗೆ ಸದಭಿರುಚಿಯ ಹವ್ಯಾಸಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಯಕ್ಷಗಾನ, ನಾಟಕ ಕಲೆಗಳಲ್ಲಿ ಹಲವು ಖ್ಯಾತನಾಮರು ಸಾಧನೆ ಮಾಡಿದ್ದಾರೆ. ಕೆರೆಮನೆ ಶಂಭು ಹೆಗಡೆಯವರು ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆ ಅಪಾರ. ಮೂರು ದಿನ ಸಮ್ಮೇಳನದಲ್ಲಿ ಯಕ್ಷಗಾನ, ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ ಎಂಬ ಹವ್ಯಕ ಕನ್ನಡದ ನಾಟಕ, ನೃತ್ಯ, ಸಂಗೀತ, ತಾಳಮದ್ದಳೆ ಇತ್ಯಾದಿ ಪ್ರದರ್ಶನಗಳು ನಡೆಯಲಿವೆ. ಹಾಗೂ ಹವ್ಯಕ ಸಾಹಿತ್ಯಕ್ಕೆ ಸಂಬಂಧಪಟ್ಟ ಪುಸ್ತಕ ಪ್ರದರ್ಶನವಿದ್ದು, ನಾಡಿನ ಪ್ರಾಚೀನ ಪಂಚಾಂಗಗಳನ್ನು ಪ್ರದರ್ಶನಕ್ಕಿಡಲಾಗಿದೆ. ಇದೇ ವೇಳೆ ಸಂಘ ಸಂಸ್ಥೆಗಳು, ವಿವಿಧ ಕ್ಷೇತ್ರದ ಸಾಧಕರು ಸೇರಿ ಒಟ್ಟು 567ಜನರನ್ನು ಸನ್ಮಾನಿಸಲಾಗುತ್ತದೆ. ಪ್ರಧಾನ ವೇದಿಕೆ ಹಾಗೂ ಸಮಾನಂತರ ವೇದಿಕೆಗಳಲ್ಲಿ ವಿವಿಧ ವಿಷಯಗಳ ಕುರಿತು ಹಲವು ಚಿಂತನ ಗೋಷ್ಠಿಗಳು ನಡೆಯಲಿವೆ.