ಶಿವಮೊಗ್ಗ: ನವುಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಮೂರು ದಿನಗಳ ವೈವಿಧ್ಯಮಯ ಹಣ್ಣುಗಳು ಮತ್ತು ಆಹಾರಮೇಳ ಮೊದಲ ದಿನ ಶನಿವಾರ ಗ್ರಾಹಕರ ಕಣ್ಮನ ಸೆಳೆಯಿತು. 150ಕ್ಕೂ ಅಧಿಕ ಮಳಿಗೆಗಳಲ್ಲಿ ಕೃಷಿಗೆ ಸಂಬಂಧಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜನಸಾಗರವೇ ಹರಿದುಬಂದಿತ್ತು.
ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟ, ರುಚಿಕರ ಹಣ್ಣುಗಳು ದೊರೆತರೆ, ಮತ್ತೊಂದೆಡೆ ರೈತರು, ಸ್ವಸಹಾಯ ಗುಂಪುಗಳು, ಉದ್ದಿಮೆದಾರರಿಗೆ ಮೇಳ ಉತ್ತಮ ಮಾರುಕಟ್ಟೆ ಕಲ್ಪಿಸಿತು. ಜತೆಗೆ ರೈತರು, ವ್ಯಾಪಾರಿಗಳು, ರಫ್ತುದಾರರು, ಸರ್ಕಾರಿ ಅಧಿಕಾರಿಗಳು ಮತ್ತು ಇತರ ಸಂಸ್ಥೆಗಳ ಮುಖ್ಯಸ್ಥರ ಪರಸ್ಪರ ಭೇಟಿಗೆ ಒಂದೇ ವೇದಿಕೆಯಡಿ ಸಂಪರ್ಕ ಕಲ್ಪಿಸಿತು. ಬಿಸಿಲು ಮತ್ತು ತಾಪಮಾನ ಏರಿಕೆ ನಡುವೆಯೂ ಗ್ರಾಹಕರು ಮೇಳವನ್ನು ಕಣ್ತುಂಬಿಕೊಂಡಿದ್ದು ವಿಶೇಷವಾಗಿತ್ತು.
ವಿಜಯಪುರ, ಬಾಗಲಕೋಟೆ ಮತ್ತಿತರ ಭಾಗಗಳಿಂದ ವಿವಿಧ ತಳಿಯ ರುಚಿಕರ ದ್ರಾಕ್ಷಿ ಹಣ್ಣುಗಳು, ಗಡ್ಡೆ-ಗೆಣಸುಗಳು, ಮೌಲ್ಯವರ್ಧಿತ ಉತ್ಪನ್ನಗಳು ಪ್ರದರ್ಶನ ಹಾಗೂ ಮಾರಾಟಕ್ಕಿದ್ದವು. ರೈತರು ತಾವೇ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಗ್ರಾಹಕರಿಗೆ ಮಾರಾಟ ಮಾಡಿದರು. ಮಲೆನಾಡಿನ ವಿಶಿಷ್ಟ ಸಿಹಿ ಖಾದ್ಯಗಳು, ಸಿರಿಧಾನ್ಯಗಳ ಉತ್ಪನ್ನಗಳು, ಜೇನು ತುಪ್ಪದ ಮೌಲ್ಯವರ್ಧಿತ ಉತ್ಪನ್ನಗಳು, ದಾವಣಗೆರೆ ಬೆಣ್ಣೆದೋಸೆ, ಹುಬ್ಬಳ್ಳಿ ಮಿರ್ಚಿ ಮಂಡಕ್ಕಿ ಮೇಳದ ಆಕರ್ಷಣೆಗಳಾಗಿದ್ದವು.