ಕಿಕ್ಕೇರಿ ಸಮೀಪದ ಕುಂದೂರು ಗ್ರಾಮದಲ್ಲಿ ವೀರಭದ್ರೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.  
ಜಿಲ್ಲೆ

ವಿಜೃಂಭಣೆಯ ವೀರಭದ್ರೇಶ್ವರಸ್ವಾಮಿ ರಥೋತ್ಸವ

ಅಭಿನಯ್ ಎಚ್.ಎಂ

ಕಿಕ್ಕೇರಿ: ಸಮೀಪದ ಕುಂದೂರು ಗ್ರಾಮದಲ್ಲಿ ಬುಧವಾರ ವೀರಭದ್ರೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದ ಬಳಿಯಿರುವ ರಂಗಸ್ಥಳದಲ್ಲಿ ರಥವನ್ನು ಕಟ್ಟಲಾಯಿತು. ನಂತರ ಹೊಸ ಜರತಾರಿ ಸೀರೆಗಳಿಂದ ರಥವನ್ನು ಅಲಂಕಾರ ಮಾಡಲಾಯಿತು. ಜತೆಗೆ ಬಣ್ಣ ಬಣ್ಣದ ಬಾವುಟಗಳಿಂದ ರಥದ ನಾಲ್ಕೂ ದಿಕ್ಕುಗಳನ್ನು ಶೃಂಗರಿಸಲಾಯಿತು.

ಅರ್ಚಕರು ಕಳಸಪೂಜೆ, ಧ್ವಜಪಟ, ಮಾರುತಿ ಪೂಜೆ, ಬಲಿಯನ್ನ ಪೂಜೆ ಅರ್ಪಿಸಿದ ಬಳಿಕ ರಥದ ನಾಲ್ಕೂ ದಿಕ್ಕುಗಳಿಗೆ ಬಲಿಯಿಟ್ಟು ಆರತಿ ಬೆಳಗಲಾಯಿತು. ನಂತರ ಉತ್ಸವಮೂರ್ತಿಯನ್ನು ಒಡವೆ, ಪುಷ್ಪ, ವಸ್ತ್ರಗಳಿಂದ ಸರ್ವಾಲಂಕಾರಗೊಳಿಸಿ ಗ್ರಾಮದಲ್ಲಿ ಮಂಗಳವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು.

ಉತ್ಸವಮೂರ್ತಿ ರಂಗಸ್ಥಳಕ್ಕೆ ಆಗಮಿಸಿ ರಥದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿಸಿ ಅಗ್ರಪೂಜೆ ಬಳಿಕ ದೃಷ್ಟಿ ನಿವಾರಕ ಪೂಜೆ ಸಲ್ಲಿಸಿ ರಥದಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಅರ್ಚಕ ಕುಂದೂರು ಜಗದೀಶ್ ವೀರಭದ್ರನ ಕುಣಿತದೊಂದಿಗೆ ದೇವರಿಗೆ ಸಾಂಪ್ರದಾಯಿಕ ಪೂಜೆ ಅರ್ಪಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಸುಮಾರು 1.5ಕಿ.ಮೀ ದೂರದಲ್ಲಿರುವ ಮೂಲ ವೀರಭದ್ರೇಶ್ವರಸ್ವಾಮಿ ಗುಡಿವರೆಗೆ ರಥವನ್ನು ಭಕ್ತರು ಎಳೆದರು. ಅಂತಿಮವಾಗಿ ದೇಗುಲದ ಪೂರ್ವ ದಿಕ್ಕಿನಲ್ಲಿ ರಥೋತ್ಸವ ಸಂಪನ್ನವಾಯಿತು. ಕುರಿಗಾಹಿಗಳು ರಥದ ಸುತ್ತ ಕುರಿಮಂದೆಯನ್ನು ಪ್ರದಕ್ಷಿಣೆ ಹಾಕಿಸಿ ತೀರ್ಥ ಪ್ರೋಕ್ಷಣೆ ಮಾಡಿಸಿದರು.

ಬಿಸಿಲಿನ ದಾಹದಲ್ಲಿದ್ದ ಭಕ್ತರಿಗೆ ನೀರುಮಜ್ಜಿಗೆ, ಪಾನಕ, ಪುಳಿಯೊಗರೆ ನೀಡಲಾಯಿತು. ರಥ ಸಾಗುವ ಇಕ್ಕೆಲಗಳಲ್ಲಿ ಭಕ್ತರು, ನವಜೋಡಿಗಳು ನಿಂತು ಕಳಶಕ್ಕೆ ಹಣ್ಣು-ದವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.