ಜಿಲ್ಲೆ

ವಿಜೃಂಭಣೆಯ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ

ಆರ್.ಕೃಷ್ಣ

ಮೈಸೂರು: ನಾಡ ಅಧಿದೇವತೆ ಶ್ರೀಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಅದ್ದೂರಿಯಾಗಿ ನೆರವೇರಿತು.
ಚಿನ್ನದ ಪಲ್ಲಕ್ಕಿಯಲ್ಲಿ ದೇವರ ಮೂರ್ತಿಯನ್ನು ಇರಿಸಿ ದೇವಸ್ಥಾನದ ಸುತ್ತ ಮಂಗಳವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು. ರಾಜವಂಶಸ್ಥರಾದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರಮೋದಾದೇವಿ ಒಡೆಯರ್, ಶಾಸಕ ಜಿ.ಟಿ.ದೇವೇಗೌಡ ಅವರು ಇತರರು ಉತ್ಸವಕ್ಕೆ ಚಾಲನೆ ನೀಡಿದರು. ದೇವಿಯ ವರ್ಧಂತಿ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಚಿನ್ನದ ಪಲ್ಲಕ್ಕಿಯಲ್ಲಿ ವಿರಾಜಮಾನವಾಗಿದ್ದ ದೇವಿಯನ್ನು ಭಕ್ತರು ಕಣ್ಮುಂಬಿಕೊಂಡರು. ಮಂಗಳವಾದ, ಸಿಡಿಮದ್ದು ಸಿಡಿಸಿ ಮೆರವಣಿಗೆ ನಡೆಸಲಾಯಿತು.
ವರ್ಧಂತಿ ಅಂಗವಾಗಿ ಚಾಮುಂಡೇಶ್ವರಿ ಅಮ್ಮನವರಿಗೆ ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದೇಗುಲದ ಗರ್ಭಗುಡಿಯಲ್ಲಿರುವ ಮೂಲ ದೇವರ ವಿಗ್ರಹಕ್ಕೆ ಬೆಳಗಿನ ಜಾವ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಬಗೆಯ ಪೂಜೆ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಬಳಿಕ ಬೆಳಗ್ಗೆ 8ರಿಂದ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಮೈಸೂರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ರಾತ್ರಿ 10ಗಂಟೆವರೆಗೂ ದೇವರ ದರ್ಶನ ಪಡೆದರು.
ನಾಡದೇವತೆ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವದಲ್ಲಿ ಹಲವು ಗಣ್ಯರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು. ಪ್ರಮುಖವಾಗಿ ರಾಜವಂಶಸ್ಥೆ ಡಾ. ಪ್ರಮೋದಾದೇವಿ ಒಡೆಯರ್, ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು.
ಹರಿದು ಬಂದ ಭಕ್ತಸಾಗರ:

ವರ್ಧಂತಿ ಮಹೋತ್ಸವದ ಅಂಗವಾಗಿ ಅಪಾರ ಸಂಖ್ಯೆಯ ಭಕ್ತರು ಬೆಟ್ಟಕ್ಕೆ ಆಗಮಿಸಿದ್ದರು. ರಾಜ್ಯದ ನಾನಾ ಭಾಗಗಳಿಂದ ಅಸಂಖ್ಯಾತ ಭಕ್ತರು ಮುಂಜಾನೆಯೇ ಬೆಟ್ಟಕ್ಕೆ ಆಗಮಿಸಿ ದೇವಿಯ ವರ್ಧಂತಿಯಲ್ಲಿ ಭಾಗವಹಿಸಿದರು. ಹೀಗಾಗಿ ಚಾಮುಂಡಿಬೆಟ್ಟದಲ್ಲಿ ಎಲ್ಲಿ ನೋಡಿದರೂ ಭಕ್ತರ ದಂಡು ಕಂಡು ಬಂದಿತು. ವರ್ಧಂತಿ ಅಂಗವಾಗಿ ನಡೆದ ಚಾಮುಂಡಿ ದೇವಿಯ ಚಿನ್ನದ ಪಲ್ಲಕ್ಕಿ ಉತ್ಸವ ಕಣ್ತುಂಬಿಕೊಂಡ ಭಕ್ತರು, ತಾಯಿ ಚಾಮುಂಡಿಯ ಜಯಘೋಷ ಕೂಗುತ್ತಾ ಭಕ್ತಿಭಾವ ಮೆರೆದರು.

ಪರಂಪರೆ ಮುಂದುವರಿದಿದೆ
ಪರಂಪರೆಯಿಂದ ನಡೆದುಕೊಂಡು ಬರುತ್ತಿರುವ ಆಚರಣೆ ಮುಂದುರೆಯುತ್ತಿದೆ. ಯದುವೀರ್ ಅವರು ದೇವರ ಮುಂದೆ ಸಂಸದರಲ್ಲ, ಸದಾ ಮಗನಾಗಿ ಇರುತ್ತಾರೆ. ನಾಡಿನ ಜನತೆಗೆ ಒಳಿತಾಗಲಿ ಎಂದು ಸಂಕಲ್ಪ ಮಾಡಿದ್ದೇವೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.

ಅತಿವೃಷ್ಟಿಯೂ ಬೇಡ, ಅನಾವೃಷ್ಟಿಯೂ ಬೇಡ, ಸಮವೃಷ್ಟಿಯಲ್ಲಿ ಮಳೆ ಆಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ತಾಯಿ ಚಾಮುಂಡೇಶ್ವರಿಗೆ ಕಳೆದ ಬಾರಿಯೇ ಸೀರೆ ಕೊಡಬೇಕು ಎಂದುಕೊಂಡಿದ್ದೆ, ಕೊಡಲು ಸಾಧ್ಯವಾಗಿರಲಿಲ್ಲ. ಪ್ರತಿ ವರ್ಷದಂತೆ ಈ ಬಾರಿ ಮೂಲ ಮೂರ್ತಿ, ಉತ್ಸವಮೂರ್ತಿ ಎರಡಕ್ಕೂ ಸೀರೆ ನೀಡಿದ್ದೇನೆ ಎಂದು ಹೇಳಿದರು.

ಸಂಪ್ರದಾಯದಂತೆ ವರ್ಧಂತಿ
ನಾನು ಸಂಸದನಾಗಿ ಮಾತ್ರವಲ್ಲ, ಚಾಮುಂಡೇಶ್ವರಿ ನಮ್ಮ ಕುಲ ದೇವತೆ. ಸಂಪ್ರದಾಯಕ್ಕೆ ಅನುಸಾರವಾಗಿ ವರ್ಧಂತಿ ಮಹೋತ್ಸವದಲ್ಲಿ ಭಾಗಿಯಾಗಿದ್ದೇವೆ. ನಾಡಿಗೆ ಉತ್ತಮ ಮಳೆ ಬೆಳೆ ಆಗಲಿ ಎಂದು ತಾಯಿಯಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇವೆ.
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
ಸಂಸದರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ