ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಮಂಗಳವಾರ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ತುಳು ಷಷ್ಠಿ ಮಹಾ ರಥೋತ್ಸವದಲ್ಲಿ ಭಕ್ತರು ತೇರು ಎಳೆದು ಸಂಭ್ರಮಿಸಿದರು. 
ಜಿಲ್ಲೆ

ವಿಜೃಂಭಣೆಯ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ

ಎ. ಆರ್. ರಘುರಾಮ

ಅರಕಲಗೂಡು: ಇತಿಹಾಸ ಪ್ರಸಿದ್ಧ ರಾಮನಾಥಪುರ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ತುಳು ಷಷ್ಠಿ ಮಹಾ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಶ್ರೀ ಸುದರ್ಶನ ಜೋಯಿಸ್, ಶ್ರೀ ಭಾರತಿರಮಣ ಆಚಾರ್ಯ ಹಾಗೂ ಪಾರುಪತ್ತೇದಾರ ರಮೇಶ್ ಭಟ್ ನೆಲ್ಲಿತೀರ್ಥ ಅವರ ಧಾರ್ಮಿಕ ಮುಖಂಡತ್ವದಲ್ಲಿ ಮುಂಜಾನೆಯಿಂದಲೇ ದೇವಾಲಯದಲ್ಲಿ ಪ್ರಾರ್ಥನೆ, ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜಾ ವಿಧಾನ ವಿಧಿವತ್ತಾಗಿ ಸಾಗಿದವು.

ವೈಮಾಳಿಗೆಯಲ್ಲಿ ದೇವರ ಉತ್ಸವ ನೆರವೇರಿಸಿ ಪ್ರದಕ್ಷಿಣೆ ಹಾಕಿದ ಬಳಿಕ ಮಧ್ಯಾಹ್ನ 12 ಗಂಟೆಗೆ ಹೂವುಗಳಿಂದ ಸಿಂಗಾರಗೊಂಡಿದ್ದ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನೆರೆದಿದ್ದ ಭಕ್ತರು ಹರ್ಷೋದ್ಗಾರದೊಂದಿಗೆ ರಥ ಎಳೆದರು. ರಥ ಮುಂದೆ ಚಲಿಸುವಾಗ ಭಕ್ತರು ತೇರಿನತ್ತ ಹಣ್ಣು ದವನ ಎಸೆದರು. ವಿಪ್ರರು ದೇವರ ನಾಮಸ್ಮರಣೆ ಮಾಡಿದರು.

ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ಹರಕೆಮುಡಿ ಸಲ್ಲಿಸಿದರು. ಸರದಿ ಸಾಲಿನಲ್ಲಿ ಆಗಮಿಸಿ ದೇವಸ್ಥಾನದಲ್ಲಿ ಹಣ್ಣು, ತುಪ್ಪ ನೈವೇದ್ಯ ಅರ್ಪಿಸಿ ಪ್ರಸಾದ ಸ್ವೀಕರಿಸಿದರು. ಜಾತ್ರೆಯಲ್ಲಿ ಸಿಹಿ ತಿನಿಸು ಸೇರಿದಂತೆ ವಿವಿಧ ವಸ್ತುಗಳನ್ನು ಕೊಂಡು ಜನರು ಸಂಭ್ರಮಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.