ಪಾಂಡವಪುರ: ಬನ್ನಮ್ಮ ದೇವಿ ಜಾತಾ ್ರಮಹೋತ್ಸವ ಅಂಗವಾಗಿ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಭಾನುವಾರ ಚಪ್ಪರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಗ್ರಾಮದ ಹೊರ ವಲಯದಲ್ಲಿರುವ ಬನ್ನಮ್ಮ ದೇವಿ ದೇವಸ್ಥಾನದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆಯಿತು. ಬಳಿಕ ನಂದಿ ಧ್ವಜ, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ ಕುಣಿತ ಹಾಗೂ ಕೋಲಾಟದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು. ಮನೆ ಬಾಗಿಲಿಗೆ ಆಗಮಿಸಿದ ದೇವಿಯ ಉತ್ಸವ ಮೂರ್ತಿಗೆ ಸ್ಥಳೀಯರು ಪೂಜೆ ಸಲ್ಲಿಸಿದರು.
ಮಧ್ಯಾಹ್ನದ ವೇಳೆಗೆ ಗ್ರಾಮದ ಮಹಿಳೆಯರು ಮತ್ತು ಹೆಣ್ಣುಮಕ್ಕಳು ತಂಬಿಟ್ಟಿನ ಆರತಿ ಹೊತ್ತು ಕಟ್ಟೇರಿ ಗ್ರಾಮದ ಏಳೂರಮ್ಮ ದೇವಸ್ಥಾನಕ್ಕೆ ತೆರಳಿದರು. ಅಲ್ಲಿ ಪೂಜೆ ನೆರವೇರಿಸಿದ ಬಳಿಕ ವಿಶ್ವೇಶ್ವರಯ್ಯ ನಾಲೆ ಬಳಿ ಧೂಳು ಮರಿ ಸೇವೆ ಮಾಡಿದರು.
ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಗ್ರಾಮವನ್ನು ತಳಿರು, ತೋರಣಗಳಿಂದ ಸಿಂಗರಿಸಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ರಾತ್ರಿ ಘಟಿ ಉತ್ಸವ ನಡೆಯಿತು. ಗ್ರಾಮಸ್ಥರೆಲ್ಲ ಒಗ್ಗೂಡಿ ಬಣ್ಣ-ಬಣ್ಣ ಬೆರೆಸಿದ ನೀರು ಎರಚಿಕೊಂಡು ಓಕುಳಿ ಆಡಿದರು.