ಕೆ.ಆರ್.ನಗರ: ಜನ್ಮದಿನದ ಹೆಸರಿನಲ್ಲಿ ಅನಗತ್ಯವಾಗಿ ದುಂದುವೆಚ್ಚ ಮಾಡುವ ಬದಲು ಆ ಹಣದಲ್ಲಿ ಸಮಾಜಮುಖಿ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಪಟ್ಟಣದ ಮಧುವನಹಳ್ಳಿ ಬಡಾವಣೆಯ ಟಿ.ಮರಿಯಪ್ಪ ಶಾಲೆಯಲ್ಲಿ ಪುತ್ರ ಸಂತೋಷ್.ವಿ.ದೇವರಹಟ್ಟಿ ಮತ್ತು ಇಂದುಮತಿ ಸಂತೋಷ್ ಅವರ ಪುತ್ರ ಶ್ರೀವಿಶ್ವ ಅವರ 11ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ನೇತ್ರ ಮತ್ತು ದಂತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಮುಂದಿನ ದಿನಗಳಲ್ಲಿ ಜನ್ಮ ದಿನಗಳನ್ನು ಶಾಲಾ, ಕಾಲೇಜುಗಳು, ಅನಾಥಾಶ್ರಮಗಳು ಮತ್ತು ಸಮಾಜದಲ್ಲಿ ನೊಂದವರ ನಡುವೆ ಆಚರಣೆ ಮಾಡಿಕೊಂಡು ಅವರಿಗೆ ಸಹಾಯಹಸ್ತ ಚಾಚಿದರೆ ಅದಕ್ಕೆ ಹೆಚ್ಚು ಅರ್ಥ ಬರಲಿದ್ದು, ಈ ಪರಂಪರೆ ನಿರಂತರವಾಗಿ ಮುಂದುವರಿಯಬೇಕು ಎಂದು ತಿಳಿಸಿದರು.
ಮನುಷ್ಯ ಜನ್ಮದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಸಂಭ್ರಮಪಡುವ ಸಮಯವಲ್ಲ. ಅದು ಪ್ರತಿವರ್ಷ ತಮ್ಮ ಜವಾಬ್ದಾರಿ ಹೆಚ್ಚಿಸುವ ಮತ್ತು ಕಾಲನೆಡೆಗೆ ನಾವು ಹತ್ತಿರವಾಗುವ ಕ್ಷಣವಾಗಿದ್ದು ಇದನ್ನು ಅರಿತು ಎಲ್ಲರೂ ಬದ್ಧತೆಯಿಂದ ನಡೆದುಕೊಂಡು ಇತರರಿಗೆ ನೆರವಾಗುವ ಉತ್ತಮ ಕೆಲಸಗಳನ್ನು ಮಾಡಿ ತಮ್ಮ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾಗಿನೆಲೆ ಕನಕಗುರು ಪೀಠದ ಕೆ.ಆರ್.ನಗರ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಅವರು ವಿಶ್ವ ಅವರನ್ನು ಆಶೀರ್ವದಿಸಿ, ಇಂಥ ಉತ್ತಮ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದು ಸಂತಸ ವ್ಯಕ್ತಪಡಿಸಿದರು.
ಶ್ರೀವಿಶ್ವ ಅವರ ಜನ್ಮ ದಿನದ ಅಂಗವಾಗಿ ಟಿ.ಮರಿಯಪ್ಪ ಶಾಲೆಗೆ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಕೊಡುಗೆಯಾಗಿ ನೀಡುವುದರ ಜತೆಗೆ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಮೈಸೂರಿನ ಡಾ.ಅಗರವಾಲ್ ಕಣ್ಣಿನ ಆಸ್ಪತ್ರೆ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ನೇತ್ರ ಮತ್ತು ದಂತ ತಪಾಸಣಾ ಶಿಬಿರ ನಡೆಸಿ ಸಿಹಿ ವಿತರಣೆ ಮಾಡಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಜಿ.ಆರ್.ರಾಮೇಗೌಡ, ಜಯರಾಮೇಗೌಡ, ಮಾರ್ಚಹಳ್ಳಿ ಶಿವರಾಮು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಪುರಸಭೆ ಸದಸ್ಯ ನಟರಾಜು, ಎಪಿಎಂಸಿ ಮಾಜಿ ನಿರ್ದೇಶಕ ಹೆಬ್ಬಾಳು ರಾಜಶೇಖರ, ಯುವ ಮುಖಂಡ ಕೆ.ಪಿ.ಪ್ರಸನ್ನ, ಮುಖ್ಯ ಶಿಕ್ಷಕರಾದ ಕೆ.ಸಿ.ಪ್ರಕಾಶ್, ಜಿ.ಜೆ.ರೇವಣ್ಣ ಇತರರು ಇದ್ದರು.