ಬೆಂಗಳೂರು: ಯುವಜನತೆ ಕ್ರೀಡಾಕೂಟದಲ್ಲಿ ಭಾಗಿಯಾಗಲು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವತ್ತ ಗಮನ ಹರಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ನಗರದ ಶ್ರೀ ಕಂಠೀರವ ಹೊರಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯು ದೈಹಿಕವಾಗಿ ಹಾಗೂ ಧನನಾತ್ಮಕವಾಗಿ ಅರೋಗ್ಯವನ್ನು ತಂದುಕೊಡುವ ಸಾಮರ್ಥ್ಯ ಹೊಂದಿದೆ. ಇದನ್ನು ಅರಿತು ಯುವಜನರು ತಮ್ಮ ಪ್ರತಿಭೆಯನ್ನು ಹೊರಹೊಮ್ಮಿಸಿದರೆ ಮುಂದಿನ ಜೀವನಕ್ಕೆ ಅನುಕೂಲವಾಗಲಿದೆ. ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸೋಲು-ಗೆಲುವು ಏನೇ ಇದ್ದರೂ, ಭಾಗವಹಿಸುವುದು ಬಹಳ ಮುಖ್ಯ ಎಂದರು.
ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಿ ದೇಶಕ್ಕೆ ಹೆಸರು ತರಬಹುದು. ಇದಕ್ಕೆ ನಮ್ಮ ಅನೇಕ ಕ್ರೀಡಾಪಟುಗಳೇ ಉದಾಹರಣೆ. ವಲಯ ಹಾಗೂ ತಾಲೂಕು ಮಟ್ಟದ ಕ್ರೀಡೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಯುವಕರಿಗೆ ಹೆಚ್ಚು ಅವಕಾಶ ಸಿಗುತ್ತವೆ. ಕ್ರೀಡಾಪಟುಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೆ.ಎ.ದಯಾನಂದ ವಿವರಿಸಿದರು.