ಜಿಲ್ಲೆ

ಸುಗ್ಗಿ ಕಾಲದಲ್ಲಿ ದಲ್ಲಾಳಿಗಳಿಂದ ಸುಲಿಗೆ ; ತಡವಾಗಿ ಖರೀದಿ ಕೇಂದ್ರ ತೆರೆಯಲು ಮುಂದಾದ ಸರ್ಕಾರ ; ಬೆಂಬಲ ಬೆಲೆ ರೂ. 3295 ; ರೈತರಿಗೆ ಸಿಗದ ಲಾಭಾಂಶ

ತುಮಕೂರು:ಬೆಂಬಲ ಬೆಲೆಯಲ್ಲಿ ರಾಗಿ ಕೊಂಡುಕೊಳ್ಳಲು ಸರ್ಕಾರ ತಡವಾಗಿ ನಿರ್ಧರಿಸಿದ ಪರಿಣಾಮ, ರೈತರಿಗೆ ಸಿಗಬೇಕಾದ ಬೆಲೆಯ ಲಾಭ ದಲ್ಲಾಳಿಗಳ ಪಾಲಾಗುವಂತಾಗಿದೆ. ಕನಿಷ್ಠ ಬೆಂಬಲ ಬೆಲೆ ನೀಡಿ ಸರ್ಕಾರ ರಾಗಿ ಖರೀದಿಸುವ ಮುನ್ಸೂಚನೆ ನೀಡಲಿಲ್ಲ. ಇದರಿಂದಾಗಿ ರೈತರು ರಾಗಿ ಮಾರಾಟ ಮಾಡಿದ್ದಾರೆ. ಆದರೆ ಸರ್ಕಾರ ಖರೀದಿ ಕೇಂದ್ರ ಆರಂಭಿಸುವ ಮಾಹಿತಿ ಇದ್ದ ದಲ್ಲಾಳಿಗಳು ಗ್ರಾಮಗಳಲ್ಲಿ ಅಡ್ಡಾಡಿ ಪ್ರಸ್ತುತ ಮಾರುಕಟ್ಟೆ ದರ ಕ್ವಿಂಟಾಲ್‌ಗೆ 1800ರೂ. ನೀಡಿ ನೂರಾರು ಕ್ಷಿಂಟಾಲ್ ರಾಗಿ ಕೊಂಡು ಹಾಕಿದ್ದಾರೆ. ಅಲ್ಲದೆ ರೈತರ ದಾಖಲೆಗಳನ್ನು ಪಡೆದು ಖರೀದಿ ಕೇಂದ್ರದಲ್ಲಿ ಸರ್ಕಾರದ ಬೆಂಬಲ ಬೆಲೆ ರೂ. 3295ಕ್ಕೆ ಮಾರಾಟ ಮಾಡಲು ವೇದಿಕೆ ಸಿದ್ಧ ಮಾಡಿಕೊಂಡಿದ್ದಾರೆ.

ಜಾಗೃತಿ ಮೂಡಿಸದ ಅಧಿಕಾರಿಗಳು: ದಲ್ಲಾಳಿಗಳ ಜತೆ ಸ್ನೇಹ ಬೆಳೆಸಿರುವ ಕೃಷಿ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಲೇ ಇಲ್ಲ. ಹೀಗಾಗಿ ಕೃಷಿ ಚಟುವಟಿಕೆ ಮುಗಿಸಿದ ಕೂಡಲೇ ಹಣದ ಅವಶ್ಯಕತೆ ಇದ್ದ ರೈತರಿಗೆ ಮೋಸದ ಅರಿವಿದ್ದರೂ ದಲ್ಲಾಳಿಗಳಿಗೆ ದಾಖಲೆ ನೀಡುವ ಅಸಹಾಯಕತೆ ಬಂದಿದೆ. ಸರ್ಕಾರ ಸಕಾಲದಲ್ಲಿ ಖರೀದಿ ಕೇಂದ್ರ ಆರಂಭಿಸಿದ್ದರೆ ಪೂರ್ತಿ ಲಾಭ ರೈತರದ್ದಾಗುತ್ತಿತ್ತು.

ಆದರೆ ಇದೀಗ ರಾಜ್ಯದ ರಾಗಿ ಬೆಳೆಯುವ ಜಿಲ್ಲೆಗಳಲ್ಲಿ ರಾಗಿ ಖರೀದಿ ಕೇಂದ್ರ ತೆರೆಯುವಂತೆ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದು ಕ್ವಿಂಟಾಲ್ ರಾಗಿಗೆ 3295 ರೂ.ನಂತೆ ಒಬ್ಬ ರೈತನಿಂದ ಒಂದು ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 50 ಕ್ವಿಂಟಾಲ್ ರಾಗಿ ಖರೀದಿಸಲು ಒಪ್ಪಿಗೆ ಸೂಚಿಸಿದೆ. ರೈತರು ನೋಂದಣಿಗೆ ಸಿದ್ಧರಾಗಿದ್ದಾರೆ. ಸರ್ಕಾರ ನಿಗದಿಪಡಿಸಿರುವ ಗುಣಮಟ್ಟದಂತೆ ರಾಗಿ ಖರೀದಿಸಲು ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಲಕ್ಕೆ ಸೂಚಿಸಲಾಗಿದೆ. ಗೋದಾಮು ಲಭ್ಯವಿರುವ ಎಪಿಎಂಸಿ ಮಾರುಕಟ್ಟೆಗಳಲ್ಲಿ ಖರೀದಿ ಕೇಂದ್ರ ಆರಂಭವಾಗುವ ಸಾಧ್ಯತೆಯಿದೆ. ಇದು ನೈಜ ರೈತರಿಗಿಂತ ರೈತರಿಂದ ಸಾವಿರಾರು ಕ್ವಿಂಟಾಲ್ ರಾಗಿ ಕೊಂಡು ಶೇಖರಿಸಿಟ್ಟುಕೊಂಡಿರುವ ದಲ್ಲಾಳಿಗಳಿಗೆ ಹೆಚ್ಚು ಖುಷಿ ತಂದಿದೆ. ಅವರೆಲ್ಲ ಈಗ ಪಹಣಿಯಲ್ಲಿ ರಾಗಿ ನಮೂದಾಗಿರುವ ರೈತರ ಹಿಂದೆ ಗಿರಕಿ ಹೊಡೆಯಲಾರಂಭಿಸಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ 3 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ರಾಜ್ಯ ಸಚಿವ ಸಂಪುಟ ಉಪಸಮಿತಿ ತೀರ್ಮಾನಿಸಿದೆ. ಜಿಲ್ಲೆಯಲ್ಲಿಯೂ ಹೆಚ್ಚು ರಾಗಿ ಕೊಂಡುಕೊಳ್ಳುವ ಸಾಧ್ಯತೆಯಿದೆ. ಡಿ.16ರಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಅಧ್ಯಕ್ಷತೆಯಲ್ಲಿ ಟಾಸ್ಕ್‌ಪೋರ್ಸ್ ಸಮಿತಿ ಸಭೆ ನಡೆಯಲಿದೆ. ಸಭೆಯ ನಂತರ ರೈತ ನೋಂದಣಿಗೆ ಆಹಾರ ಇಲಾಖೆ ಮೂಲಕ ತೀರ್ಮಾನಿಸಲಿದೆ. ಬೆಲೆ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಖರೀದಿ ಕೇಂದ್ರ ಆರಂಭಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು.

ದಲ್ಲಾಳಿಗಳ ದುಂಬಾಲು:ರಾಗಿ ವ್ಯಾಪಾರದ ರುಚಿ ಕಂಡಿರುವ ಕಾರಣಕ್ಕೆ ಎಲ್ಲೆಡೆಯೂ ಹೊಸಹೊಸ ದಲ್ಲಾಳಿಗಳು ಸೃಷ್ಟಿಯಾಗಿದ್ದು ರೈತರಿಂದ ನೂರಾರು ಕ್ವಿಂಟಾಲ್ ರಾಗಿ ಕೊಂಡುಕೊಂಡು ಖರೀದಿ ಕೇಂದ್ರದ ಆರಂಭಕ್ಕೆ ಕಾಯುತ್ತಿದ್ದಾರೆ. ಸರ್ಕಾರ ಆರಂಭಿಸುವ ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳೇ ಹೆಚ್ಚು ಲಾಭ ಪಡೆಯುವ ಸಾಧ್ಯತೆಯಿದೆ. ದಲ್ಲಾಳಿಗಳ ಜತೆ ಹೊಂದಿಕೊಂಡಿರುವ ಅಧಿಕಾರಿಗಳು ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡು ಲಾಭ ಪಡೆಯಲು ಖರೀದಿ ಕೇಂದ್ರದ ಆರಂಭಕ್ಕೆ ಸಿದ್ಧತೆ ನಡೆಸಿದ್ದಾರೆ. ರೈತರ ಹೆಸರಿನಲ್ಲಿ ದಲ್ಲಾಳಿಗಳು ಹಬ್ಬ ಮಾಡಲಿದ್ದಾರೆ.

ರಾಗಿ ಬೆಳೆಯುವ ಜಿಲ್ಲೆಗಳಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವತಿಯಿಂದ ರಾಗಿ ಖರೀದಿ ಕೇಂದ್ರ ಆರಂಭಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿದ್ದು ಈ ಬಗ್ಗೆ ಬುಧವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಅವರ ಸೂಚನೆಯಂತೆ ಸರ್ಕಾರದ ಮಾರ್ಗಸೂಚಿಯಂತೆ ಕೇಂದ್ರ ಆರಂಭಿಸಲು ಕ್ರಮಕೈಗೊಳ್ಳಲಾಗುವುದು. ಶ್ರೀನಿವಾಸಯ್ಯ ಡಿಡಿ, ಆಹಾರ ಇಲಾಖೆ ಸಕಾಲದಲ್ಲಿ ಖರೀದಿ ಕೇಂದ್ರ ಆರಂಭಿಸಲಿಲ್ಲ, ಕೃಷಿಯ ಖರ್ಚು ತೂಗಿಸಲು ಕಣದಿಂದಲೇ ರಾಗಿಯನ್ನು ಮಾರುಕಟ್ಟೆ ದರಕ್ಕೆ ಮಾರಿದ್ದೇವೆ. ದಲ್ಲಾಳಿಗಳು ದಾಖಲೆಗಳಿಗೆ ನಮ್ಮ ಹಿಂದೆ ಬಿದ್ದಿದ್ದು ಅದಕ್ಕಾಗಿ ನೂರು, ಇನ್ನೂರು ಕೊಟ್ಟು ಲಾಭ ಮಾಡಿಕೊಳ್ಳುತ್ತಾರೆ. 1800ಕ್ಕೆ ನಮ್ಮಿಂದ ಕೊಂಡುಕೊಂಡ ಮಧ್ಯವರ್ತಿಗಳು 3295ರೂ. ಗೆ ಮಾರುತ್ತಾರೆ. ಕರಿಬಸವಯ್ಯ ರೈತ, ಹಾಗಲವಾಡಿ