ಜಿಲ್ಲೆ

ದನ ಕಳ್ಳನ ಗಡಿಪಾರು

ಗೋಪಾಲಕೃಷ್ಣ ಪಾದೂರ್

ಉಡುಪಿ: ಅಕ್ರಮ ಜಾನುವಾರು ಸಾಗಾಟ ಮತ್ತು ಹಿಂಸೆ, ಕಳವು ಸಹಿತ 9 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸ್ ಇಲಾಖೆ ವರದಿ ಆಧಾರದಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ 6 ತಿಂಗಳು ಗಡಿಪಾರು ಮಾಡಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಗುಲ್ವಾಡಿ ಗ್ರಾಮದ ಕಾಂಡ್ಲಗದೆ ನಿವಾಸಿ ಅಬೂಬಕ್ಕರ್ (43 ವರ್ಷ) ಗಡಿಪಾರಿಗೆ ಒಳಗಾದ ಆರೋಪಿ. ಈತ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೊರ ಬಂದ ನಂತರವೂ ಕೂಡ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತಂದಿದ್ದಾನೆ. ಕುಂದಾಪುರ ಗ್ರಾಮಾಂತರ ಠಾಣಾ ಸರಹದ್ದು ಕೋಮು ಸೂಕ್ಷ್ಮಪ್ರದೇಶವಾಗಿದ್ದು, ಈತನ ವಿರುದ್ಧ ಕ್ರಮಕೈಗೊಳ್ಳುವಂತೆ ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಎಸಿಯವರಿಗೆ ವರದಿ ನೀಡಿದ್ದರು.

6 ತಿಂಗಳ ಕಾಲ ಗಡಿಪಾರು ಶಿಕ್ಷೆ ವಿಧಿಸಿ, ಜಮಖಂಡಿ ಉಪವಿಭಾಗಕ್ಕೆ ಕಳುಹಿಸಲಾಗಿದೆ. ಈತ 6 ತಿಂಗಳ ಒಳಗೆ ಪ್ರಾಧಿಕಾರದ ಅನುಮತಿ ಪಡೆಯದೆ ಕುಂದಾಪುರ ಪೊಲೀಸ್ ಉಪವಿಭಾಗದಲ್ಲಿ ಕಾಣಿಸಿಕೊಂಡಲ್ಲಿ ಬಂಧಿಸುವಂತೆ ಆದೇಶ ಹೊರಡಿಸಿದ್ದಾರೆ.