ಕೊಳ್ಳೇಗಾಲ: ಕೆ.ಆರ್.ಎಸ್. ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಶನಿವಾರ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ತಾಲೂಕಿನಲ್ಲಿ ಸಂಪೂರ್ಣವಾಗಿತ್ತು.
ಪಟ್ಟಣದಲ್ಲಿ ಆಸ್ಪತ್ರೆ, ಮೆಡಿಕಲ್, ಕ್ಲಿನಿಕ್, ಹಾಲಿನ ಅಂಗಡಿ ಹೊರತುಪಡಿಸಿ ಉಳಿದ ಎಲ್ಲ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು. ಜನ-ವಾಹನ ಸಂಚಾರ ವಿರಳವಾಗಿತ್ತು. ಖಾಸಗಿ ಬಸ್‌ಗಳು ರಸ್ತೆಗಿಳಿಸದೆ ಮಾಲೀಕರು ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದರು. ಬೇರೆಡೆಯಿಂದ ಪಟ್ಟಣಕ್ಕೆ ಬೆಳಗ್ಗೆ ಆಗಮಿಸಿದ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರು ಸಂಚರಿಸಿದರು. ಮಧ್ಯಾಹ್ನದ ನಂತರ ಬಸ್ ಸಂಚಾರ ಇಲ್ಲದೆ ಪ್ರಯಾಣಿಕರಿಗೆ ತೊಂದರೆಯಾಯಿತು. ಕೆಲವೆಡೆ ತೆರೆದಿದ್ದ ಬ್ಯಾಂಕ್‌ಗಳನ್ನು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಮುಚ್ಚಿಸಿದರು.
ನಂತರ ವಿವಿಧ ಸಂಘಟನೆ ಪದಾಧಿಕಾರಿಗಳು, ಬಸ್ ನಿಲ್ದಾಣದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕೊನೆಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಸಮಾವೇಶಗೊಂಡು ಪ್ರತಿಭಟಿಸಿದರು.
ರೈತ ಮುಖಂಡರಾದ ಬಸವರಾಜು ಮಧುವನಹಳ್ಳಿ, ಶೈಲೇಂದ್ರ, ನಾಗರಿಕ ಹಿತರಕ್ಷಣಾ ಸಮಿತಿ ನಟರಾಜ್ ಮಾಳಿಗೆ, ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕಮಲ್ ನಾಗರಾಜು, ಎಸ್‌ಡಿಪಿಐ ಕಲೀಲ್, ಕರ್ನಾಟಕ ರಕ್ಷಣಾ ವೇದಿಕೆ ನಂದ, ಪ್ರಗತಿಪರ ಸಂಘಟನೆಯ ದಿಲೀಪ್ ಸಿದ್ದಪ್ಪಾಜಿ, ಜಯ ಕರ್ನಾಟಕ ಪ್ರಭು, ಆಯಾಜ್ ಇತರರು ಇದ್ದರು.
ಪ್ರತಿಭಟನೆಗೆ ಬಿಜೆಪಿ ಸಾಥ್: ಪಟ್ಟಣದಲ್ಲಿ ಪ್ರಗತಿಪರ ಸಂಘಟನೆ ಹೋರಾಟಕ್ಕೆ ಭಾರತೀಯ ಜನತಾ ಪಾರ್ಟಿ ಪದಾಧಿಕಾರಿಗಳು ಸಾಥ್ ನೀಡಿದರು. ಈ ವೇಳೆ ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ಕಾವೇರಿ ವಿಚಾರವಾಗಿ ಆಗಸ್ಟ್ ತಿಂಗಳಲ್ಲಿ ಕಾವೇರಿ ಪ್ರಾಧಿಕಾರ ಹಾಗೂ ಸುಪ್ರೀಂಕೋರ್ಟ್ ಕೂಡ ಸೂಚನೆ ನೀಡಿರಲಿಲ್ಲ. ತಜ್ಞರಿಂದ ಈ ಸಾಲಿನ ಮುಂಗಾರಿನಲ್ಲಿ ಮಳೆ ಅಭಾವವಿದೆ ಎಂದು ತಿಳಿದಿತ್ತು. ಈ ಸೂಚನೆ ಇದ್ದರೂ ಆಗಸ್ಟ್‌ನಲ್ಲಿ ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ ನೀರನ್ನು ಏಕೆ ಬಿಟ್ಟರು ಎಂಬುದು ಪ್ರಶ್ನೆಯಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತರಿಸಬೇಕು. ರೈತರಿಗೆ ಸಮಸ್ಯೆಯಿದ್ದರೂ ನೀರು ಏಕೆ ಬಿಟ್ಟಿದ್ದಾರೆ. ನೀರು ಹರಿಸಿದ ಮೇಲೆ ಸರ್ವ ಪಕ್ಷದ ಸಭೆ ಕರೆದಿದ್ದಾರೆ. ಕೊನೆಗೆ ಸುಪ್ರೀಂ ಕೋರ್ಟ್ ನೀರು ಬಿಡುವ ಆದೇಶ ಮಾಡಿದೆ. ದೆಹಲಿಯಲ್ಲಿ ಸಿಎಂ ಹಾಗೂ ಡಿಸಿಎಂ ಮತ್ತು ಸಚಿವರು 25 ಲೋಕಸಭಾ ಸದಸ್ಯರ ಜತೆ ಸಭೆ ನಡೆಸುವಾಗ ಅವರಿಗೆ ಏನು ತಾಕೀತು ಮಾಡಿದ್ದರು. ಆ ಸಭೆಯ ನಡಾವಳಿಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿದರು. ಮುಖಂಡರಾದ ಬಸವರಾಜಪ್ಪ, ಶಿವಕುಮಾರ್, ಮಧುಚಂದ್ರ, ಪ್ರಕಾಶ್ ಶಂಕನಪುರ, ಎಸ್.ಸಿದ್ದಪ್ಪಾಜಿ, ಜಗದೀಶ್ ಇತರರು ಇದ್ದರು.