ಜಿಲ್ಲೆ

ಪಾದಯಾತ್ರಿಗಳಿಗೆ ವ್ಯಾಪಕ ಸೌಲಭ್ಯ

Avinash R

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಿವರಾತ್ರಿ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಆಗಮಿಸುತ್ತಿರುವ ಪಾದಯಾತ್ರಿಗಳಿಗಾಗಿ ಚಾರ್ಮಾಡಿಯಿಂದ ಸರ್ವ ಸಿದ್ಧತೆಗಳು ಪೂರ್ಣಗೊಂಡಿವೆ. ಪಾದಯಾತ್ರಿಗಳು ಸಾಗಿ ಬರುವ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಸದ ಬುಟ್ಟಿ, ಗೋಣಿಚೀಲಗಳನ್ನು ಇರಿಸಿ ಕಸ ಹಾಕಲು ವ್ಯವಸ್ಥೆ ಮಾಡಲಾಗಿದೆ. ಚಾರ್ಮಾಡಿ ಘಾಟಿ ಸೇರಿದಂತೆ ಚಾರ್ಮಾಡಿ, ಮುಂಡಾಜೆ, ಕಲ್ಮಂಜದಲ್ಲಿ ಭಕ್ತರಿಂದ ಪಾದಯಾತ್ರಿಗಳಿಗೆ ಅನ್ನದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ. ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನ ಸೇರಿದಂತೆ ಅಲ್ಲಲ್ಲಿ ಪಾದಯಾತ್ರೆ ತಂಡಗಳಿಗೆ ಅಡುಗೆ ತಯಾರಿ, ವಿಶ್ರಾಂತಿ ಪಡೆಯಲು ಬೇಕಾದ ವ್ಯವಸ್ಥೆ ಕಲ್ಪಿಸಲಾಗಿದೆ. ಅರಣ್ಯ ಇಲಾಖೆ ಘಾಟಿ ಪರಿಸರದ ರಸ್ತೆ ಬದಿ ಬೆಂಕಿ ಅನಾಹುತಗಳು ಉಂಟಾಗದಂತೆ ಬೆಂಕಿ ರೇಖೆ ರಚಿಸಿದೆ. ಅಲ್ಲಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಪಾದಯಾತ್ರಿಗಳ ಅಗತ್ಯ ಸೇವೆಗೆ ತಂಡಗಳು ಸಿದ್ಧಗೊಂಡಿವೆ. ಪಾದಯಾತ್ರಿಗಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸೂಚನಾ ಫಲಕವನ್ನು ಅಳವಡಿಸಲಾಗಿದೆ. ಅರಣ್ಯ ಇಲಾಖೆಯ ವಿಶೇಷ ಕೌಂಟರ್‌ಗಳನ್ನು ತೆರೆದು ಪಾನೀಯ ಇತ್ಯಾದಿ ವ್ಯವಸ್ಥೆ ಮಾಡಲಾಗಿದೆ. ಕಳೆದ ಹತ್ತಾರು ದಿನಗಳಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪಾದಯಾತ್ರೆ ತಂಡಗಳು ಧರ್ಮಸ್ಥಳಕ್ಕೆ ಹೊರಟಿವೆ. ಪಾದಯಾತ್ರೆ ತಂಡಗಳ ವ್ಯವಸ್ಥಾಪಕರು ಅಡುಗೆ ಇನ್ನಿತರ ವ್ಯವಸ್ಥೆಗಳ ಬಗ್ಗೆ ಈಗಾಗಲೇ ಚಾರ್ಮಾಡಿ, ಮುಂಡಾಜೆ ತಲುಪಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಕೆಲವು ತಂಡಗಳ ಪಾದಯಾತ್ರಿಗಳು ಚಾರ್ಮಾಡಿ, ಮುಂಡಾಜೆ ತಲುಪಿದ್ದರೆ ಕೆಲವೊಂದು ತಂಡಗಳು ಧರ್ಮಸ್ಥಳ ತಲುಪಿವೆ. ಬುಧವಾರ ಶಿವರಾತ್ರಿ ಆಚರಣೆ ಇರುವುದರಿಂದ ಅಂದು ಕ್ಷೇತ್ರದಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಳ್ಳಲಿದ್ದಾರೆ. ತಂಡಗಳಿಂದ ಭಜನೆ ಪಾದಯಾತ್ರೆ ತಂಡಗಳು ವಿಶ್ರಾಂತಿ ವೇಳೆ ಅಲ್ಲಲ್ಲಿ ಕುಳಿತು ಭಜನೆ, ಶಿವ ಪಂಚಾಕ್ಷರಿ ಮಂತ್ರ ಜಪಿಸುವುದು ಕಂಡುಬರುತ್ತದೆ. ಸ್ಥಳೀಯ ದೇಗುಲಗಳಿಗೆ ಆಗಮಿಸುವ ಪಾದಯಾತ್ರಿಗಳು ಅಲ್ಲಿಯು ಭಜನೆಯಲ್ಲಿ ತೊಡಗಿರುತ್ತಾರೆ. ಉಜಿರೆ ಎಸ್‌ಡಿಎಂ ಆಸ್ಪತ್ರೆ ವತಿಯಿಂದ ಚಾರ್ಮಾಡಿ, ಮುಂಡಾಜೆ, ಉಜಿರೆ, ಧರ್ಮಸ್ಥಳ, ಬೂಡುಜಾಲು ಪ್ರದೇಶಗಳು ಸೇರಿದಂತೆ ಅಲ್ಲಲ್ಲಿ ಪಾದಯಾತ್ರಿಗಳ ಅನುಕೂಲಕ್ಕಾಗಿ ಉಚಿತ ಆರೋಗ್ಯ ಸೇವೆಯ ಕೌಂಟರ್‌ಗಳನ್ನು ತೆರೆಯಲಾಗಿದ್ದು ಅಗತ್ಯ ಸಿಬ್ಬಂದಿ ನೇಮಿಸಲಾಗಿದೆ. ತುರ್ತು ಸಂದರ್ಭಕ್ಕೆ ಆಂಬುಲೆನ್ಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಸ ಹಾಕಲು ಗೋಣಿಚೀಲಗಳನ್ನು ಸ್ಥಳೀಯರು ಸಂಘ-ಸಂಸ್ಥೆಯವರು ವ್ಯವಸ್ಥೆ ಮಾಡಿದ್ದಾರೆ. ಚಾರ್ಮಾಡಿ ಘಾಟಿಯಿಂದ ಮುಂಡಾಜೆ, ಉಜಿರೆ ಹಾಗೂ ಕಲ್ಮಂಜ ಮೂಲಕ ಧರ್ಮಸ್ಥಳಕ್ಕೆ ತೆರಳುವ ರಸ್ತೆ ಬದಿ ಹಲವಾರು ತಾತ್ಕಾಲಿಕ ಅಂಗಡಿಗಳು ತಲೆ ಎತ್ತಿವೆ. ಮುಂಡಾಜೆ ತಲುಪುತ್ತಿದ್ದಂತೆ ತಂಡಗಳು ಮೃತ್ಯುಂಜಯ ನದಿಯಲ್ಲಿ ಮಿಂದು ಮುಂದುವರಿಯುತ್ತಿವೆ. ಸ್ಥಳೀಯರಿಂದ ಪಾದಯಾತ್ರಿಗಳಿಗೆ ಬೆಲ್ಲ, ನೀರು,ಪಾನಕ, ಶರಬತ್ತು, ಕಲ್ಲಂಗಡಿ ಇತ್ಯಾದಿ ಸೇವೆ ಸಲ್ಲಿಕೆಯಾಗುತ್ತಿದೆ.

ನಮ್ಮ ದೇವಸ್ಥಾನದಲ್ಲಿ ಶಿವರಾತ್ರಿ ಪಾದಯಾತ್ರಿಗಳಿಗಾಗಿ ಕುಡಿಯುವ ನೀರು,ಅಡುಗೆ,ವಸತಿ ಹಾಗು ಇನ್ನಿತರ ಅಗತ್ಯಗಳಿಗಾಗಿ ವ್ಯವಸ್ಥೆ ಮಾಡಲಾಗಿದೆ.ಈಗಾಗಲೇ ಕೆಲವು ತಂಡಗಳು ತಲುಪಿವೆ. ಸೋಮವಾರ, ಮಂಗಳವಾರ ಹೆಚ್ಚಿನ ಪಾದಯಾತ್ರಿಗಳು ಆಗಮಿಸಲಿದ್ದಾರೆ. ಕಜೆ ವೆಂಕಟೇಶ್ವರ ಭಟ್, ಆಡಳಿತ ಮೊಕ್ತೇಸರ, ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನ, ಮುಂಡಾಜೆ.