ಜಿಲ್ಲೆ

ಮಂಗಳೂರು-ಕಬಕ-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯಕ್ಕೆ ವಿಸ್ತರಣೆ

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಅವಿರತ ಪ್ರಯತ್ನಕ್ಕೆ ಬಹುದೊಡ್ಡ ಯಶಸ್ಸು ಲಭಿಸಿದ್ದು, ದಶಕಗಳ ಪ್ರಮುಖ ಬೇಡಿಕೆಯಾಗಿರುವ ಮಂಗಳೂರು-ಕಬಕ ಪ್ಯಾಸೆಂಜರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಇದರಿಂದ ಇನ್ನುಮುಂದೆ ಮಂಗಳೂರು-ಪುತ್ತೂರು-ಸುಬ್ರಹ್ಮಣ್ಯ ನಡುವೆ ಪ್ರತಿದಿನ ಸಂಚರಿಸುವ ಪ್ರಯಾಣಿಕರು ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ಹೋಗುವ ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

ಹೊಸ ವೇಳಾಪಟ್ಟಿ ಪ್ರಕಾರ ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್ ರೈಲು(56625) ಮುಂಜಾನೆ 4 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಕಬಕ-ಪುತ್ತೂರಿಗೆ ಮುಂಜಾನೆ 5.18ಕ್ಕೆ ತಲುಪಲಿದೆ. ಅಲ್ಲಿ ಅದು 2 ನಿಮಿಷ ನಿಲುಗಡೆಯಾಗಿ ಬೆಳಗ್ಗೆ 6.30ಕ್ಕೆ ಸುಬ್ರಹ್ಮಣ್ಯ ರಸ್ತೆಗೆ ಬಂದು ತಲುಪಲಿದೆ. ಅದೇ ರೀತಿ ಸುಬ್ರಹ್ಮಣ್ಯ-ಮಂಗಳೂರು(56626) ಪ್ಯಾಸೆಂಜರ್ ರೈಲು ಬೆಳಗ್ಗೆ 7ಕ್ಕೆ ಸುಬ್ರಹ್ಮಣ್ಯ ರಸ್ತೆಯಿಂದ ಹೊರಟು 7.48ಕ್ಕೆ ಕಬಕ-ಪುತ್ತೂರು ತಲುಪಲಿದೆ. ಅಲ್ಲಿ 2 ನಿಮಿಷ ನಿಲುಗಡೆಯಾಗಿ 9.30ಕ್ಕೆ ಮಂಗಳೂರು ಸೆಂಟ್ರಲ್‌ಗೆ ತಲುಪಲಿದೆ.

ಇನ್ನೊಂದೆಡೆ, ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್ ರೈಲು(56627) ಸಂಜೆ 5.45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಸಂಜೆ 7.03ಕ್ಕೆ ಪುತ್ತೂರಿಗೆ ತಲುಪಲಿದೆ. ಬಳಿಕ ಎರಡು ನಿಮಿಷ ನಿಲುಗಡೆಯಾಗಿ ರಾತ್ರಿ 8.10ಕ್ಕೆ ಸುಬ್ರಹ್ಮಣ್ಯ ರಸ್ತೆಗೆ ತಲುಪಲಿದೆ. ಹಾಗೆಯೇ, ಸುಬ್ರಹ್ಮಣ್ಯ ರಸ್ತೆ-ಮಂಗಳೂರು ಪ್ಯಾಸೆಂಜರ್ ರೈಲು(56628) ರಾತ್ರಿ 8.40ಕ್ಕೆ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಹೊರಟು ರಾತ್ರಿ 9.28ಕ್ಕೆ ಕಬಕ-ಪುತ್ತೂರಿಗೆ ತಲುಪಿ ಅಲ್ಲಿ 2 ನಿಲುಗಡೆಯಾಗಿ ರಾತ್ರಿ 11.10ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ನೈಋತ್ಯ ರೈಲ್ವೆ ಹಾಗೂ ದಕ್ಷಿಣ ರೈಲ್ವೆಯು ಅನುಕೂಲತೆ ಪರಿಶೀಲಿಸಿ ಆದಷ್ಟು ಬೇಗ ಈ ರೈಲು ವಿಸ್ತರಣೆ ಸೇವೆಯನ್ನು ಆರಂಭಿಸುವಂತೆ ರೈಲ್ವೆ ಮಂಡಳಿಯು ತನ್ನ ಆದೇಶದಲ್ಲಿ ಸೂಚಿಸಿದೆ.

ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸೇವೆಯನ್ನು ಯಾತ್ರಾರ್ಥಿಗಳು ಹಾಗೂ ಸ್ಥಳೀಯ ಜನರು-ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಬ್ರಹ್ಮಣ್ಯ ರಸ್ತೆ ಸ್ಟೇಷನ್‌ಗೆ ವಿಸ್ತರಿಸಬೇಕೆಂಬುದು ಸುಮಾರು ಎರಡು ದಶಕಗಳ ಬೇಡಿಕೆಯಾಗಿತ್ತು. ಸಂಸದನಾದ ಬಳಿಕ ನಡೆದ ಸಂಸತ್ತಿನ ಮೊದಲ ಅಧಿವೇಶನದಲ್ಲೇ ಈ ರೈಲು ವಿಸ್ತರಣೆ ಬೇಡಿಕೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿ ರೈಲ್ವೆ ಸಚಿವರ ಗಮನಸೆಳೆದಿದ್ದೆ. ಇತ್ತೀಚೆಗಷ್ಟೇ ರೈಲ್ವೆ ಮಂಡಳಿ ಅಧ್ಯಕ್ಷರನ್ನು ಖುದ್ದು ಭೇಟಿಯಾಗಿ ಈ ಪ್ಯಾಸೆಂಜರ್ ರೈಲನ್ನು ಆದಷ್ಟು ಬೇಗ ಸುಬ್ರಹ್ಮಣ್ಯದವರೆಗೆ ವಿಸ್ತರಿಸಬೇಕೆಂದು ಮನವಿ ಸಲ್ಲಿಸಿದ್ದೆ. ಇದೀಗ ಕರಾವಳಿ ರೈಲ್ವೆ ಯಾತ್ರಿಕರ ಅನುಕೂಲಕರವಾಗುವಂತೆ ಬಹುಬೇಡಿಕೆಯಾಗಿರುವ ಮಂಗಳೂರು-ಕಬಕ ಪುತ್ತೂರು ಪ್ಯಾಸೆಂಜರ್ ಟ್ರೈನ್ ಅನ್ನು ಸುಬ್ರಹ್ಮಣ್ಯ ರಸ್ತೆವರೆಗೆ ವಿಸ್ತರಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಕೂಡ ರೈಲ್ವೆ ಮಂಡಳಿ ಪ್ರಕಟಿಸಿರುವುದು ನಮ್ಮ ಜಿಲ್ಲೆಯ ಜನತೆ ಹಾಗೂ ಸಂಸದನ ನೆಲೆಯಲ್ಲಿ ನಮ್ಮೆಲ್ಲರ ಸಾಂಘಿಕ ಪ್ರಯತ್ನಕ್ಕೆ ಸಂದ ಜಯ ಎಂದು ಕ್ಯಾ. ಚೌಟ ಹೇಳಿದ್ದಾರೆ.