ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ಲಾಕ್‌ಡೌನ್ ಸಂಕಷ್ಟದ ವೇಳೆ ಬಿತ್ತನೆ ಬೀಜ ಸೇರಿ ಗೊಬ್ಬರಕ್ಕೂ ಹಣವಿಲ್ಲದೆ ಕೈಕಟ್ಟಿ ಕುಳಿತಿದ್ದ ಅನ್ನದಾತನನ್ನು ಮಳೆರಾಯ ಕೈ ಹಿಡಿದಿದ್ದರೆ ಭೂಮಿ ತಾಯಿಯೂ ನೆರವಿಗೆ ನಿಂತಿದ್ದಾಳೆ ಎಂಬುದಕ್ಕೆ ರಾಜಘಟ್ಟ ಗ್ರಾಮದ ರೈತ ಚಿಕ್ಕಮುನಿಯಪ್ಪ ಎಂಬುವರ ಹೊಲ ಸಾಕ್ಷಿಯಾಗಿದೆ.
ಕರೊನಾ ಲಾಕ್‌ಡೌನ್ ವೇಳೆ ಸಂಕಷ್ಟಕ್ಕೊಳಗಾಗಿದ್ದ ರೈತರೊಬ್ಬರ ಜಮೀನಿನಲ್ಲಿ ಪ್ರಕೃತಿ ಮಾತೆ ವಿಸ್ಮಯ ತೋರಿದ್ದಾಳೆ. ಕಳೆದ ವರ್ಷ ರಾಗಿ ಬೆಳೆ ಕಟಾವು ವೇಳೆ ನೆಲಕ್ಕೆ ಉದುರಿದ್ದ ರಾಗಿಯೇ ಬೆಳೆದು ಉತ್ತಮ ಬೆಳೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಉಳುಮೆ ಮಾಡಿ, ಗೊಬ್ಬರ ಹಾಕಿ, ಕಾಲ ಕಾಲಕ್ಕೆ ಕಳೆ ಕಿತ್ತರೂ ಉತ್ತಮ ರಾಗಿ ಬೆಳೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಈ ಬಾರಿ ಉತ್ತದೆ ಬಿತ್ತದೆ ತನ್ನಷ್ಟಕ್ಕೆ ತಾನೆ ರಾಗಿ ಸಲು ಕೈಹಿಡಿದಿರುವುದು ರೈತನ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
ಮೇವು ಸಿಗುತ್ತೆ ಅಂದುಕೊಂಡ್ವಿ.. ಭೂತಾಯಿ ಬೆಳೆಯನ್ನೇ ಕೊಟ್ಟಿದ್ದಾಳೆ: ಕಳೆದ ವಾರ್ಷಿಕ ಬೆಳೆ ಕಟಾವಿನಲ್ಲಿ ಉದುರಿದ್ದ ರಾಗಿಯೇ ಹೊಲದ ತುಂಬ ಮೊಳಕೆ ಒಡೆದಿತ್ತು. ಬಿತ್ತನೆಗೆಂದು ಉಳುಮೆ ಮಾಡಿದ ನಂತರವೂ ರಾಗಿ ಮೊಳಕೆ ಹೊಡೆಯಿತು. ಮಳೆಯೂ ಹೆಚ್ಚಾಗಿತ್ತು. ಇದರೊಂದಿಗೆ ಬಿತ್ತನೆ ಮಾಡಲು ಸಾಲ ಮಾಡುವ ಪರಿಸ್ಥಿತಿಯೂ ಇತ್ತು. ಇಂತಹ ಸಂದರ್ಭದಲ್ಲಿ ರಾಸುಗಳಿಗೆ ಹುಲ್ಲಾದರೂ ಆಗಲಿ ಎಂದು ಹಾಗೆಯೇ ಬಿಟ್ಟೆ. ಆದರೆ ಆಶ್ಚರ್ಯವೆಂಬಂತೆ ರಾಗಿ ಸಲು ಬೆಳೆದು ನಿಂತಿದೆ. ಹೀಗಾಗುತ್ತದೆ ಎಂದು ನಾನು ಕನಸಲ್ಲೂ ಎಣಿಸಿರಲಿಲ್ಲ ಎಂದು ರೈತ ಚಿಕ್ಕಮುನಿಯಪ್ಪ ಆಶ್ಜರ್ಯ ವ್ಯಕ್ತಪಡಿಸಿದ್ದಾರೆ.
ನಮ್ಮ ಅಧಿಕಾರಿಗಳು ಆ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾತಾವರಣ ಹಾಗೂ ಉತ್ತಮ ಮಳೆಯಿಂದಾಗಿ ಕಳೆದ ಬಾರಿ ಕಟಾವಿನ ವೇಳೆ ಉದುರಿದ್ದ ರಾಗಿಯಿಂದಾಗಿ ಬೆಳೆ ಬಂದಿದೆ. ರಾಗಿಯೂ ಬಳಕೆಗೆ ಯೋಗ್ಯವಾಗಿದೆ. ಸುಶೀಲಮ್ಮ, ಸಹಾಯಕ ಕೃಷಿ ನಿರ್ದೇಶಕಿ ದೊಡ್ಡಬಳ್ಳಾಪುರ